ದೇವದುರ್ಗ | ಕೆಳ ಭಾಗದ ರೈತರಿಗೆ ನೀರು ಹರಿಸಲು ಕರ್ನಾಟಕ ರಾಜ್ಯ ರೈತ ಸಂಘ ಮನವಿ
ದೇವದುರ್ಗ, ಡಿ.28 : ಅವೈಜ್ಞಾನಿಕ ವಾರಬಂದಿ ನೀರಾವರಿ ವ್ಯವಸ್ಥೆಯಿಂದಾಗಿ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗದೆ, ಬೆಳೆದು ನಿಂತಿರುವ ಬೆಳೆಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ವಾರಕ್ಕೆ 8 ದಿನ ನೀರು ಹರಿಸಬೇಕೆಂದು ರೈತರು ಮನವಿ ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ರೈತರ ಸಲಹೆಗಳಿಗೆ ಸ್ಪಂದಿಸಿದರೆ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೆ ಪ್ರತಿವರ್ಷ 10 ದಿನ ಬಂದ್ ಮಾಡಿ 14 ದಿನ ನೀರು ಹರಿಸುವ ವ್ಯವಸ್ಥೆಯ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಮೆಣಸಿನಕಾಯಿ ಬೆಳೆ ಚೆನ್ನಾಗಿ ಬೆಳೆಯುತ್ತಿದೆಯಾದರೂ, ಅಗತ್ಯ ಪ್ರಮಾಣದ ನೀರು ಲಭ್ಯವಾಗದಿದ್ದರೆ ಬೆಳೆ ಹಾನಿಯಾಗುವ ಸಂಭವವಿದೆ. ಹೀಗಾಗಿ ತಕ್ಷಣ 10 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿದೆ.
ಕಾಲುವೆಗೆ ನೀರು ಹರಿಸಲು ಆದೇಶ ನೀಡಿದ ಮೂರು ದಿನಗಳಾದರೂ ಇನ್ನೂ ನೀರು ಬಂದಿಲ್ಲ. ಈಗಾಗಲೇ ಹತ್ತಿ ಬೆಳೆ ನಷ್ಟಗೊಂಡಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀರಾವರಿ ಇಲಾಖೆಯಿಂದ ರೈತರಿಗೆ ಲಾಭವಾಗದೆ ನಷ್ಟವೇ ಉಂಟಾಗುತ್ತಿದೆ ಎಂದು ಪ್ರಭಾಕರ್ ಪಾಟೀಲ್ ಇಂಗಳದಾಳ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.