ಬರ ಪರಿಹಾರಕ್ಕೆ ಸರಕಾರದಿಂದ ಸೂಕ್ತ ನಿರ್ಧಾರ: ಸಚಿವ ಡಾ.ಅಜಯ್ ಧರಂ ಸಿಂಗ್

Update: 2026-08-07 15:25 IST

ರಾಯಚೂರು, ಆ.7: ಬರ ಪರಿಸ್ಥಿತಿ, ಅತಿವೃಷ್ಠಿ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂ ಸಿಂಗ್ ಶುಕ್ರವಾರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.

ಮೊದಲಿಗೆ ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ಯಾಕ್ಲಾಸಪೂರ ಸೀಮಾಂತರದ ಸರ್ವೇ ನಂಬರ್ 179 ಹಾಗೂ 180 ಜಮೀನುಗಳಿಗೆ ಭೇಟಿ ಹೊಲದಲ್ಲಿನ ಹತ್ತಿ ಹಾಗೂ ತೊಗರಿ ಬೆಳೆಗಳನ್ನು ವೀಕ್ಷಿಸಿದರು.

ನೀರಿನ ಕೊರತೆಯಿಂದ ಬೆಳೆಯ ಬೆಳೆವಣಿಗೆಯಲ್ಲಿ ಕುಠಿತ ಆಗಿರುವ ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆಯಿಲ್ಲದೆ ಹಾಗೂ ನೀರಿನ ಅಭಾವದಿಂದ ನಾವು ಹಾಕಿರುವ ಬೆಳೆ ಒಣಗಿದೆ. ಕಷ್ಟಪಟ್ಟು ಬಿತ್ತನೆ ಮಾಡಿದ ನಮಗೆ ಫಸಲು ಕೈಗೆ ಸಿಕ್ಕಿಲ್ಲ. ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ನಮ್ಮ ನೆರವಿಗೆ ಸ್ಪಂದಿಸಬೇಕೆಂದು ರೈತರು ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ಸಚಿವ ಡಾ.ಅಜಯ್ ಧರಂಸಿಂಗ್ ಮಾತನಾಡಿ, ಮುಖ್ಯಮಂತ್ರಿಯ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಮಳೆ, ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ವರದಿ ಮಾಡಲಾಗುತ್ತದೆ. ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರದ ಕ್ರಮಗಳನ್ನು ವಹಿಸಲಿದೆ. ರೈತರ ಎಲ್ಲ ಸಂಕಷ್ಟ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

ನಂತರ ಸಾತ್ ಮೈಲಿ ಬಿಳಿಯ ಹುಣಸಿಹಾಳಹುಡ್ ಸೀಮಾಂತರದ ಸರ್ವೇ ನಂಬರ್ 30(1) ಜಮೀನಿಗೆ ಭೇಟಿ ನೀಡಿ ಹತ್ತಿ ಬೆಳೆಯನ್ನು ವೀಕ್ಷಣೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ತೀವ್ರಗೊಂಡಿರುವ ರೈತರ ಸಮಸ್ಯೆಗಳು ಮತ್ತು ಬೆಳೆ ಹಾನಿ ಪರಿಶೀಲನೆಗಾಗಿ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಆಯಾ ಭಾಗದ ಶಾಸಕರು ಒಟ್ಟಾಗಿ ಪ್ರತಿ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರೈತರ ಸಂಕಷ್ಟಗಳನ್ನು ನೇರವಾಗಿ ಅರಿತುಕೊಂಡು ವರದಿ ಒಪ್ಪಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಅದರಂತೆ ಪ್ರತಿಯೊಂದು ತಾಲೂಕಿಗೂ ಭೇಟಿ ನೀಡಲಾಗುತ್ತಿದೆ ಎಂದರು.

ಬೆಳೆ ಹಾನಿ ಸಮೀಕ್ಷೆ: ರಾಯಚೂರು ಜಿಲ್ಲೆಯಲ್ಲಿ ಸುಮಾರು 2,27,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹತ್ತಿ, ಸೂರ್ಯಕಾಂತಿ ಮತ್ತು ತೊಗರಿ ಸೇರಿದಂತೆ ಶೇಕಡಾ 90ರಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಸಾಲ ಮನ್ನಾ ಮಾಡುವಂತೆ ಹಾಗೂ ತುರ್ತಾಗಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

ರಾಜ್ಯ ಸರ್ಕಾರವು ರೈತರ ಪರವಾಗಿದ್ದು, ಕೇಂದ್ರ ಸರ್ಕಾರವು ರೈತರ ನೆರವಿಗೆ ಬರಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕಳೆದ ಐದು ವರ್ಷಗಳಿಂದ ರೈತರಿಗೆ ಇನ್ಶೂರೆನ್ಸ್ ಕ್ಲೈಮ್ ಸಿಗದ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ರೈತರಿಗೆ ಅನುಕೂಲವಾಗುವಂತೆ ಸರಳೀಕರಣ ಮಾಡಲು ಹಾಗೂ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರಿಯಪ್ಪ ತಾತನ ದರ್ಶನ:

ಸಚಿವರು ಇದೇ ವೇಳೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕ್ಷೇತ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತನವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಸ್ಥಳೀಯ ಮುಖಂಡರೊಂದಿಗೆ ಕೆಲಕಾಲ ಚರ್ಚಿಸಿದರು. ನಂತರ ಪ್ರಸಾದ್ ಸ್ವೀಕರಿಸಿದರು.

ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಎಸ್.ಪಾಟೀಲ್, ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಶಿಲ್ದಾರ್ ಸುರೇಶ ವರ್ಮಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ಉಪ ಜಂಟಿ ನಿರ್ದೇಶಕ ನಹೀಂ ಹುಸೇನ್, ಸಹಾಯಕ ನಿರ್ದೇಶಕಿ ದೀಪಾ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News