ರೈತರಿಗೆ ಬರ ಪರಿಹಾರ ನೀಡಿ, ಸಾಲಮನ್ನಾ ಮಾಡಿ: ಶಿವರಾಜ ಪಾಟೀಲ್ ಒತ್ತಾಯ

Update: 2026-08-07 12:18 IST

ರಾಯಚೂರು: ಜಿಲ್ಲೆಯಲ್ಲಿ ಮುಂದುವರಿದಿರುವ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಗೆ ಮಾಡಿದ ಅಪಾರ ವೆಚ್ಚವೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ರೈತರಿಗೆ ಸಮರ್ಪಕ ಬರ ಪರಿಹಾರ ಘೋಷಿಸಿ, ಸಾಲಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಶಾಸಕ ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಪ್ರತಿ ಎಕರೆಗೆ ಸುಮಾರು 15 ಸಾವಿರ ರೂ.ಗೂ. ಹೆಚ್ಚು ವೆಚ್ಚ ಮಾಡಿ ಬಿತ್ತನೆ ನಡೆಸಿದರೂ ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಅನೇಕ ರೈತರು ಮೂರು ಬಾರಿ ಬಿತ್ತನೆ ಮಾಡಿದರೂ ಯಾವುದೇ ಫಲ ದೊರಕಿಲ್ಲ. ಆದ್ದರಿಂದ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಬರ ಪರಿಹಾರ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ರೈತರು ದೇಶದ ಬೆನ್ನೆಲುಬು ಮತ್ತು ರಾಷ್ಟ್ರದ ಅಮೂಲ್ಯ ಆಸ್ತಿಯಾಗಿದ್ದಾರೆ. ಆದರೆ ನಿರಂತರ ನಷ್ಟದಿಂದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಮಕ್ಕಳನ್ನು ಉದ್ಯೋಗ ಅರಸಿ ಬೆಂಗಳೂರಿನಂತಹ ಮಹಾನಗರಗಳಿಗೆ ಕಳುಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಕೃಷಿ ಲಾಭದಾಯಕವಾಗದ ಕಾರಣ ಗ್ರಾಮೀಣ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ವರ್ಷ ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಬರದ ಹೊಡೆತಕ್ಕೆ ಸಿಲುಕಿವೆ. ಅದರಲ್ಲೂ ಹತ್ತಿ ಬೆಳೆಗೆ ಪಿಂಕ್ ಬೋಲ್ವರ್ಮ್ (ಪಿಂಕ್ ರೋಗ) ಕಾಟ ಹೆಚ್ಚಾಗಿರುವುದರಿಂದ ರೈತರು ಮತ್ತಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಹಾನಿ, ಉತ್ಪಾದನೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ರೈತರು ಆರ್ಥಿಕವಾಗಿ ಸಂಪೂರ್ಣ ಕುಗ್ಗುವಂತಾಗಿದೆ ಎಂದು ಹೇಳಿದರು.

ನನಗೆ ಬಾಲ್ಯದಿಂದಲೇ ಕೃಷಿಯ ಬಗ್ಗೆ ನೇರ ಅನುಭವವಿದೆ. ರೈತರ ನೋವು, ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಆದ್ದರಿಂದ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಬರ ಪರಿಹಾರ, ಸಾಲಮನ್ನಾ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಬರಗಾಲದಿಂದ ಜಾನುವಾರುಗಳಿಗೆ ಮೇವು ಕೊರತೆಯೂ ತೀವ್ರವಾಗಿ ಎದುರಾಗಿದ್ದು, ರೈತರು ಜಾನುವಾರುಗಳನ್ನು ಸಾಕುವುದೂ ಕಷ್ಟಕರವಾಗಿದೆ. ಸರ್ಕಾರ ತುರ್ತು ಕ್ರಮ ಕೈಗೊಂಡು ಮೇವು ಬ್ಯಾಂಕ್ ಗಳನ್ನು ಸ್ಥಾಪಿಸುವುದು, ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಸಮಗ್ರ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತ ಸಮುದಾಯವನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News