×
Ad

ಫೆ.9ರಂದು ಆಲಮಟ್ಟಿಗೆ ರೈತರ ನಡೆ: ಕೃಷ್ಣಾ ಮೇಲ್ದಂಡೆ ಹಂತ-3 ತಕ್ಷಣ ಜಾರಿಗೆ ಆಗ್ರಹ

Update: 2026-01-20 23:45 IST

ಯಾದಗಿರಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ನ್ನು ತಕ್ಷಣ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಫೆಬ್ರವರಿ 9ರಂದು ಆಲಮಟ್ಟಿ ಜಲಾಶಯದ ಬಳಿ ಬೃಹತ್ ರೈತ ಹೋರಾಟ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀಕಾಂತ ಎ. ಪಾಟೀಲ್, ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ಈ ಹೋರಾಟವನ್ನು ಆಯೋಜಿಸಲಾಗಿದ್ದು, ವಿವಿಧ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಯೋಜನೆಯ ಮೂರನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 14 ಅಡಿ ಹೆಚ್ಚಿಸಲು ಅವಕಾಶವಿದ್ದರೂ ಇದುವರೆಗೆ ಜಾರಿಯಾಗಿಲ್ಲ. ಇದರಿಂದ 150 ಟಿಎಂಸಿ ನೀರು ಸಂಗ್ರಹಿಸಿ ಬಳಸುವ ಅವಕಾಶ ಕೈ ತಪ್ಪಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.

ಮೂರನೇ ಹಂತದಲ್ಲಿ ಒಟ್ಟು 9 ಉಪಯೋಜನೆಗಳಿದ್ದು, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಸುಮಾರು 5.49 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಆದರೆ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದ ಆಂಧ್ರ ಪ್ರದೇಶದ ತಗಾದೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಯೋಜನೆ ಇತ್ಯರ್ಥವಾಗದೆ ಉತ್ತರ ಕರ್ನಾಟಕದ ಶೇ.11ರಷ್ಟು ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಯೋಜನೆ ಜಾರಿಯಾದರೆ ವಡಗೇರಿ ತಾಲ್ಲೂಕಿನ ವಡಗೇರಿ, ತುಮಕೂರು, ಅಭಿವ್ಯಾಳ, ರೊಟ್ಟಡಿಗಿ, ಬೂದಿಯಾಳ, ಕದರಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಭೀಮಾ ಪ್ಲಾಂಟ್ ಯೋಜನೆಯಿಂದ ನೀರು ದೊರೆಯಲಿದೆ. ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಮಲ್ಲಾಬಾದಿ ಏತನೀರಾವರಿ ಲಿಫ್ಟ್–1, 2 ಹಾಗೂ 3 ಹಂತಗಳ ಮೂಲಕ ನೀರು ಒದಗಿಸುವ ಉದ್ದೇಶವಿದೆ ಎಂದು ವಿವರಿಸಿದರು.

ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಕೊನೆ ಭಾಗದ ರೈತರಿಗೆ ಪ್ರತಿವರ್ಷ ನೀರು ಸಿಗದೆ ಭೂಮಿ ಬರಡಾಗುತ್ತಿದೆ. ಎರಡನೇ ಬೆಳೆಗೆ ನೀರು ಒದಗಿಸುವಂತೆ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಗೊಳಿಸಿ ಜಲಾಶಯ ಎತ್ತರ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಹೋರಾಟದಲ್ಲಿ ನಾಡಿನ ವಿವಿಧ ಮಠಾಧೀಶರು, ಸಂಘಟನೆಗಳ ಮುಖಂಡರು, ಚಿಂತಕರು, ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು ಹಾಗೂ ಕೃಷಿ ಸಂಬಂಧಿ ಉದ್ಯಮದಾರರು ಸೇರಿದಂತೆ ಅಪಾರ ಸಂಖ್ಯೆಯ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷ ಮಹಾವೀರ ಲಿಂಗೇರಿ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಯರಗೋಳ, ಮಹಿಪಾಲರೆಡ್ಡಿ, ಸುಭಾಷ್ ನಡುವಿನಕೇರಿ, ಶಿವು ಯರಗೋಳ, ಮೊಹಮ್ಮದ್ ಗೌಸ್, ಶ್ರೀಕಾಂತ್ ಕುಂಬಾರ, ತಾಯಪ್ಪ ನಗಲಾಪೂರ, ಬಾಷ್ ಕುರುಕುಂದಿ, ಭವಾನಿಶಂಕರ, ಸೈದು ವಿಭೂತಿ, ಸಾಬರೆಡ್ಡಿ, ಶರಣು ಖಾನಾಪೂರ, ಅರುಣ ಸಾಹುಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News