ಶಹಾಪುರ | ಹಳ್ಳಕ್ಕೆ ವಿಷ ಮಿಶ್ರಣ : ನೂರಾರು ಮೀನು ಸಾವು, ಗ್ರಾಮಸ್ಥರಲ್ಲಿ ಆತಂಕ
ಶಹಾಪುರ ತಾಲ್ಲೂಕಿನ ಮುನಮುಟಗಿ ಗ್ರಾಮದಲ್ಲಿ ಹರಿಯುವ ಹಳ್ಳಕ್ಕೆ ವಿಷ ಅನಿಲ/ವಿಷಕಾರಿ ಪದಾರ್ಥ ಮಿಶ್ರಣ ಮಾಡಿದ ಪರಿಣಾಮ ನೂರಾರು ಮೀನುಗಳು ಹಾಗೂ ನೀರು ಕುಡಿದ ಮೇಕೆಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕನ್ಯಾಕೋಳೂರಿನಿಂದ ಹರಿದು ಬರುವ ಈ ಹಳ್ಳವು ಮುನಮುಟಗಿ ಗ್ರಾಮದ ಮೂಲಕ ಹರಿದು ಹೋಗುತ್ತದೆ. ಹಳ್ಳದಲ್ಲಿ ವಿಷ ಮಿಶ್ರಣ ಮಾಡಿರುವ ಕಾರಣ ಮೀನುಗಳು ತೇಲಿಬಂದು ಸತ್ತಿರುವುದಾಗಿ ಗ್ರಾಮದ ಮುಖಂಡ ಸುರೇಶಗೌಡ ನಾಡಗೌಡರ್ ತಿಳಿಸಿದ್ದಾರೆ. ನೀರು ಕುಡಿದ ಮೂರ್ನಾಲ್ಕು ಮೇಕೆಗಳೂ ಮೃತಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರು ಹಾಗೂ ಜಾನುವಾರುಗಳು ಪ್ರತಿದಿನ ಇದೇ ಹಳ್ಳದ ನೀರನ್ನು ಉಪಯೋಗಿಸುತ್ತಿದ್ದು, ಕೆಲವರು ಅವಧಿ ಮೀರಿದ ಕೀಟನಾಶಕ ಔಷಧಿಗಳನ್ನು ಹಳ್ಳದಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಭದ್ರತೆ ಕುರಿತು ಭೀತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ವಡಗೇರಾ ತಾಲ್ಲೂಕು ತಹಶೀಲ್ದಾರರಿಗೆ ಮಾಹಿತಿ ನೀಡಲಾಗಿದ್ದು, ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ವಿಷ ಮಿಶ್ರಣ ಮಾಡಿದವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.