×
Ad

ಯಾದಗಿರಿ | ಬಜೆಟ್‌ನಲ್ಲಿ ದಲಿತರಿಗೆ ನ್ಯಾಯಯುತ ಪಾಲು ನೀಡಿ: ಡಿಎಸ್‌ಎಸ್ ಮನವಿ

Update: 2026-03-05 20:49 IST

ಯಾದಗಿರಿ : 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಜನಸಂಖ್ಯೆ ಆಧಾರಿತವಾಗಿ ಸಮರ್ಪಕ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಗೋಪಾಲ ತಳವಾರ ವಜ್ಜಲ್ ಮಾತನಾಡಿ, ಎಸ್‌ಸಿ/ಎಸ್‌ಟಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್‌ನಲ್ಲಿ ನ್ಯಾಯಯುತ ಪಾಲು ದೊರಕುವುದು ಸಂವಿಧಾನಬದ್ಧ ಹಕ್ಕು. ಆದರೆ ಕಳೆದ ಹಲವು ವರ್ಷಗಳಿಂದ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಬಿ.ಆರ್. ಅಂಬೇಡ್ಕರ್ ಅವರು ದಲಿತರ ವಿಮೋಚನೆಗೆ ಶಿಕ್ಷಣ ಅತ್ಯಗತ್ಯವೆಂದು ಹೇಳಿದ್ದರೂ, ಸ್ವಾತಂತ್ರ್ಯಕ್ಕೆ ದಶಕಗಳು ಕಳೆದರೂ ಅಸಮಾನತೆ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಮುಂದುವರಿದಿರುವುದು ವಿಷಾದಕರವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಎಂದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ನ್ಯಾಯ ಒದಗಿಸುವುದಾಗಿದೆ ಎಂದು ಅವರು ತಿಳಿಸಿದರು.

ಕಲಬುರಗಿ ವಿಭಾಗ ಸಂಘಟನೆ ಸಂಚಾಲಕ ಹೊನ್ನಪ್ಪ ರಸ್ತಾಪುರ ಮಾತನಾಡಿ, ಈ ಬಜೆಟ್‌ನಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಜನಸಂಖ್ಯೆ ಆಧಾರದ ಮೇಲೆ ಕಟ್ಟುನಿಟ್ಟಾಗಿ ಶೇ.24.1 ಅನುದಾನ ಮೀಸಲಿಡಬೇಕು. ಮೀಸಲಿಟ್ಟ ಅನುದಾನವನ್ನು ಅದೇ ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು, ಇತರ ಯೋಜನೆಗಳಿಗೆ ವರ್ಗಾಯಿಸಬಾರದು ಎಂದು ಒತ್ತಾಯಿಸಿದರು.

ಹಿಂದಿನ ವರ್ಷಗಳಲ್ಲಿ ಬಳಕೆಯಾಗದೆ ಉಳಿದಿರುವ ವಿಶೇಷ ಘಟಕ ಯೋಜನೆ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಸತಿ ನಿಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಹಾಗೂ ದೌರ್ಜನ್ಯ ತಡೆ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮೀಸಲಿಡುವುದು, ಎಸ್‌ಸಿ/ಎಸ್‌ಟಿ ಮೀಸಲಾತಿಗೆ ಆದಾಯ ಮಿತಿಯನ್ನು ₹15 ಲಕ್ಷಕ್ಕೆ ಹೆಚ್ಚಿಸುವುದು, ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರತಿಭಟನೆಯಲ್ಲಿ ಶಿವಶರಣ ಯಾಳಗಿ, ಶರಣಪ್ಪ ಅನವಾರ, ಸಿದ್ದಣ್ಣ ಬೇವಿನಹಳ್ಳಿ, ಹಣಮಂತ ಭದ್ರಾವತಿ, ಸಿದ್ದರಾಮ ಬಾರಿಗಿಡ, ಗುರುಪುತ್ರ ಮೂದನೂರ್, ಶಿವಪ್ಪ ಕಂಬಾರ, ಪರಶುರಾಮ್ ಮೂದನೂರ್, ಬಸವರಾಜ ವಜ್ಜಲ್, ಜಗದೀಶ್ ಶಾಖಾ, ಮಂಜುನಾಥ ಮಲ್ಲಾ, ರಾಯಪ್ಪ ಯತ್ನಾಳ್, ಅಂಬರೀಶ್ ಬೊಮ್ಮನಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News