ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ದವಾಗಿ ಜಾರಿಯಾಗಬೇಕು: ಕೋಡಿಹಳ್ಳಿ ಚಂದ್ರಶೇಖರ್
ಸಿಂಧನೂರು: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕಾದರೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನು ಬದ್ದವಾಗಿ ಜಾರಿಗೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ, ಜೈ ಜವಾನ ಜೈ ಕಿಸಾನ ಸೇವಾ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಎಂಎಸ್‍ಪಿ ಜಾರಿಯಾದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಸಂದರ್ಭದಲ್ಲಿ ಸರಕಾರವೇ ರೈತರ ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಇದರಿಂದ ರೈತರಿಗೆ ಕನಿಷ್ಟ ಬೆಲೆಯಾದರೂ ಸಿಗಲಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸರಕಾರದ ವಿರುದ್ದ ಜನಾಂದೋಲನ ರೂಪಿಸಬೇಕು ಎಂದು ಹೇಳಿದರು.
ತುಂಗಭದ್ರಾ ಈ ಭಾಗದ ಜೀವನಾಡಿ. ಸುಮಾರು 32 ಟಿಎಂಸಿಯಷ್ಟು ಹೂಳು ತುಂಬಿದ್ದರಿಂದ ನೀರಿನ ಸಮಸ್ಯೆ ಎದುರಾಗುತ್ತದೆ. ಸರಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಹೂಳೆ ತೆಗೆಸಬೇಕು. ಇಲ್ಲಿದಿದ್ದರೆ ನವಲಿ ಸಮನಾಂತರ ಜಲಾಶಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಎಲ್ಲಾ ವಸ್ತುಗಳ ಬೆಲೆಯನ್ನು ಉತ್ಪಾದಕರು ನಿರ್ಧರಿಸುತ್ತಾರೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆಯನ್ನು ವರ್ತಕರು ನಿರ್ಧರಿಸುತ್ತಾರೆ. ಬೆಲೆಯಿಲ್ಲದೇ ಅನ್ನದಾತನ ಬದುಕು ದುಸ್ತರವಾಗಿದೆ. ಯಾವುದೇ ಸರಕಾರಗಳು ಬಂದರೂ ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ರೈತಪರ ಸಂಘಟನೆಗಳು ಹೆಚ್ಚು ಬಲಗೊಳ್ಳಬೇಕಿದೆ ಎಂದು ಹೇಳಿದರು.
ಈ ವೇಳೆ ರಂಭಾಪುರಿ ಕಾಸಾಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿದರು. ತುರ್ವಿಹಾಳ ಅಮೋಘ ಸಿದ್ದೇಶ್ವರಮಠದ ಮಾದಯ್ಯ ಗುರುವಿನ್, ಬಂಗಾರಿ ಕ್ಯಾಂಪಿನ ಶರಣರು ಸಾನಿಧ್ಯ ವಹಿಸಿದ್ದರು. ಬಸವರಾಜ ಗೋಡಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ಮುಖಂಡ ರಾಜೇಶ ಹಿರೇಮಠ, ತಿಮ್ಮಣ್ಣ ಸಾಹುಕಾರ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗವೇಣಿ ಪಾಟೀಲ್, ಮಹಾದೇವಮ್ಮ, ಸುವರ್ಣ ಹಿರೇಮಠ, ಸಿಪಿಐಎಂನ ಎಂ.ಗಂಗಾಧರ, ಬಸವರಾಜ ಗೊರೇಬಾಳ, ಪರಶುರಾಮ, ರವಿಕುಮಾರ್, ವೀರೇಶ ದಿದ್ದಿಗಿ, ನಾರಾಯಣ ಬೆಳಗುರ್ಕಿ, ಸಿದ್ದನಗೌಡ ಗೋನವಾರ, ಮಾಳಪ್ಪ ಪೂಜಾರಿ, ದೊಡ್ಡನಗೌಡ ಕಲ್ಲೂರು, ಹನುಮಂತಪ್ಪ ಗೋಡಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.