ರಾಯಚೂರು ಮಹಾನಗರ ಪಾಲಿಕೆ, ಎಸ್‌ಬಿಐನಿಂದ ವಿಶೇಷ ಕಾರ್ಯಕ್ರಮ
ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯಿಂದ ಲೀಡ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಪಿಎಂ ಬೀದಿ ಮಾರಾಟಗಾರರ ಸ್ವಾವಲಂಬಿ ನಿಧಿ (ಪಿಎಂ ಸ್ವನಿಧಿ) ಬೀದಿ ವ್ಯಾಪಾರಿಗಳಿಗೆ ವಿಶೇಷ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸಾಲ ಮೇಳವು ಡಿಸೆಂಬರ್ 23ರಂದು ಯಶಸ್ವಿಯಾಗಿ ನಡೆಯಿತು.
ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಹಾಗೂ ಎಸ್‌ಬಿಐ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸರಕಾರದ ಕಲ್ಯಾಣ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೀದಿ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ಸರಕಾರದ ಮಹತ್ವದ ಯೋಜನೆಯ ಬಗ್ಗೆ ರಾಯಚೂರು ಜನತೆಗೆ ಅರಿವು ಮೂಡಿಸಲು ನಗರದ ಎಸ್‌ಬಿಐ ಕೇಂದ್ರ ಬ್ಯಾಂಕ್‌ನಲ್ಲಿ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳು ಸೇರಿದ್ದರು.
ಈ ವೇಳೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಮಾತನಾಡಿ, ಸ್ವಾವಲಂಬಿ ಜೀವನೋಪಾಯಕ್ಕೆ ಅಗತ್ಯವಾದ ಆರ್ಥಿಕ ಸಹಾಯ ಒದಗಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡ ಈ ಮೇಳಕ್ಕೆ ಬೆಳಿಗ್ಗೆಯಿಂದಲೇ ಉತ್ತಮ ಸ್ಪಂದನೆ ದೊರೆತಿದೆ, ಈ ಮೇಳದಿಂದ ನಮ್ಮಲ್ಲಿ ಉತ್ಸಾಹ ಮೂಡಿದೆ. ರಾಯಚೂರು ಮಹಾನಗರ ಪಾಲಿಕೆಯಿಂದ ಮುಂದಿನ ದಿನಗಳಲ್ಲಿಯು ಸಹ ಬೀದಿ ವ್ಯಾಪಾರಿಗಳ ಆರ್ಥಿಕ ಶಕ್ತೀಕರಣಕ್ಕಾಗಿ ಬ್ಯಾಂಕ್‌ಗಳು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಮೇಳದಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಫಲಾನುಭವಿಗಳಿಗೆ ಯೋಜನೆಯ ವಿವರಗಳು, ಅರ್ಹತೆ, ದಾಖಲೆಗಳು ಹಾಗೂ ಸಾಲ ಪ್ರಕ್ರಿಯೆಗಳ ಕುರಿತು ಸ್ಥಳದಲ್ಲಿಯೇ ಮಾಹಿತಿ ನೀಡಿದರು. ಈ ವೇಳೆ, ಸುಮಾರು 50 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸಾಲ ಮಂಜೂರಿ ಮಾಡಿ ದೃಢೀಕರಿಸಲಾಯಿತು. ದಿನಾಂಕ 23ರಂದು ಸ್ವೀಕೃತಿಯಾದ ಎಲ್ಲಾ ಅರ್ಜಿಗಳಿಗೆ ದಿನಾಂಕ 24ರೊಳಗೆ ಸಾಲ ಮಂಜೂರಿ ಮಾಡಲಾಗುವುದು ಎಂದು ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ಸೀತಾಬಾಯಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಾದ ಶ್ರೀ ಕೃಷ್ಣ ಶಾವಂತಗೇರಿ, ಸಂತೋಷ ರಾಣಿ, ಸುರೇಶ ವಿಭೂತಿಮಠ್, ರಸೂಲ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ, ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ಆನಂದ ವಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.