ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸಚಿವ ಡಾ.ಶರಣ ಪ್ರಕಾಶ್ ಸೂಚನೆ
ಸೇಡಂ: ಮಳೆಯಿಂದ ಹಾನಿಯಾದ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಫೋಟೋ ತೆಗೆದುಕೊಂಡು ಹಾಕುವುದಲ್ಲ, ಜನರ ಕಷ್ಟಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸಿ ತಕ್ಷಣವೇ ವರದಿ ಸಲ್ಲಿಸಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸೂಚಿಸಿದರು.
ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮವಾಗಿ ಸೇಡಂ ತಾಲೂಕಿನ ಮಳಖೇಡ ಕಾಗಿಣಾ ನದಿ ಪ್ರವಾಹ ಉಂಟಾಗಿದ್ದು, ಮಳಖೇಡದ ಪ್ರವಾಹ ಪೀಡಿತ ಸ್ಥಳಗಳಿಗೆ ಶರಣ ಪ್ರಕಾಶ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳಖೇಡ ಕಾಗಿಣಾ ನದಿ ತೀರದ ಸಮಖೇಡ ತಾಂಡಾದ ಪ್ರತಿ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಮಳಖೇಡದ ಕೋಲಿವಾಡ, ದರ್ಗಾ ಕಾಲನಿ ಹಾಗೂ ಮಳಖೇಡ ಕಾಲನಿ ರಸ್ತೆ, ಹಳ್ಳ ಹಾಗೂ ಕಾಗಿಣಾ ನದಿ ತೀರದ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸುವಂತೆ ತಾಲೂಕು ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪಂಚಾಯತ್ ಅಧಿಕಾರಿಗಳು ಪ್ರವಾಹ ಪೀಡಿತರನ್ನು ಗುರುತಿಸಿ ನಿಗಾ ವಹಿಸಬೇಕು. ಕಾಗಿಣಾ ನದಿ ಪಾತ್ರದ ಸ್ಥಳದಲ್ಲಿ ಜನ ಜಾನುವಾರುಗಳು ಇಳಿಯದಂತೆ ಪೊಲೀಸರು ಹಾಗೂ ಅಧಿಕಾರಿಗಳು ಎಚ್ಚರಿಕೆ ನೀಡಿ, ಡಂಗುರ ಹೊಡಿಸುವಂತೆ ಅವರು ತಿಳಿಸಿದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ವಿವಿಧ ಗ್ರಾಮಗಳಿಗೆ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶರಣ ಪ್ರಕಾಶ್ ಪಾಟೀಲ್, ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಕೀತು ಮಾಡಿ, ಸಾರ್ವಜನಿಕರಿಗೆ ಮಳೆಯಿಂದ ಆದ ಹಾನಿಯ ಬಗ್ಗೆ ನಿಗಾಯಿಟ್ಟು ವರದಿ ಬರೆದುಕೊಳ್ಳಿ ಎಂದು ಸೂಚಿಸಿದರು.
ಸೇಡಂ ತಾಲೂಕಿನ ಬೀರನಳ್ಳಿ, ಮೀನಹಾಬಳ, ಯಡಗಾ, ಕುಕ್ಕುಂದಾ, ಕಾಚೂರು ಗ್ರಾಮ ಸೇರಿದಂತೆ ಇನ್ನು ಅನೇಕ ಅತಿವೃಷ್ಟಿಯಿಂದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಮಾತುಗಳನ್ನು ಆಲಿಸಿ, ಪ್ರವಾಹದ ಹಾನಿ ಪರಿಶೀಲನೆ ನಡೆಸಿ, ಯಾವ ಯಾವ ಗ್ರಾಮಗಳಲ್ಲಿ ಇರುವುದಕ್ಕೂ ಮನೆಯಿರುವುದಿಲ್ಲ ಅಂಥಹ ಗ್ರಾಮಸ್ಥರಿಗೆ ಮನೆ ಕಲ್ಪಿಸಿ, ಪಂಚಾಯತ್ ಕಡೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಶರಣ ಪ್ರಕಾಶ್ ಪಾಟೀಲ್ ಅಭಯ ನೀಡಿದರು.
ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸೂಕ್ತ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಹಾಯಕ ಆಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಅವರು ತಿಳಿಸಿದರು.