Raichur | ಎಸ್‌ಐಆರ್ ವಿರುದ್ಧ ಜಾಗೃತಿ ಅಗತ್ಯ: ಸರ್ವಪಕ್ಷ ಸಂಘಟನೆಗಳ ಒಕ್ಕೂಟ
ರಾಯಚೂರು: ಎಸ್‌ಐಆರ್ ವಿರೋಧಿ ಜಾತ್ಯತೀತ ಸರ್ವಪಕ್ಷ ಸಂಘಟನೆಗಳ ಒಕ್ಕೂಟದ ವತಿಯಿಂದ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಕಾರ್ಯಾಲಯದಲ್ಲಿ ಎಸ್‌ಐಆರ್ ತರಬೇತಿ ಶಿಬಿರ ಜರುಗಿತು.
ಎದ್ದೇಳು ಕರ್ನಾಟಕ ಜಿಲ್ಲಾ ಘಟಕದ ಸಂಯೋಜಕ ಶರಣಕುಮಾರ್ ಮುದ್ದಂ ಗುಡ್ಡಿ ಮಾತನಾಡಿ, ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಸ್‌ಐಆರ್‌ನಿಂದ ಈಗಾಗಲೇ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರು ಆರುವರೆ ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದರು.
ಇದರಿಂದ ಜನಸಾಮಾನ್ಯರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಗಂಭೀರ ಸಮಸ್ಯೆಗೆ ಸಿಲುಕಲಿದ್ದಾರೆ. ಕರ್ನಾಟಕದಲ್ಲಿಯೂ ಶೀಘ್ರದಲ್ಲೇ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಯಾವುದೇ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ನಗರ ಘಟಕದ ಅಧ್ಯಕ್ಷ ಮುಹಮ್ಮದ್ ಅತೀಕ್ ಎಸ್‌ಐಆರ್ ಕುರಿತು ಪಿಪಿಟಿ ಮೂಲಕ ತರಬೇತಿದಾರರಿಗೆ ಸವಿಸ್ತಾರ ಮಾಹಿತಿ ನೀಡಿದರು.
ಎಸ್‌ಡಿಪಿಐ ರಾಯಚೂರು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮುಷ್ತಾಕ್ ಅಹ್ಮದ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್ ಮಾತನಾಡಿ, ಇಂತಹ ಕಾರ್ಯಾಗಾರಗಳನ್ನು ಹೆಚ್ಚಾಗಿ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸತ್ಯನಾಥ್, ಸಮದ್ ಪಾಷಾ, ಭೀಮಣ್ಣ ಹಿರೇನಗನೂರು, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ. ಅನಿಲ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.