×
Ad

Sindhanur | ಸಾಧು ವೇಷದಲ್ಲಿ ಬಂದು ಅರ್ಧ ತೊಲೆ ಬಂಗಾರ, 10 ಸಾವಿರ ರೂ. ದೋಚಿದ ಅಪರಿಚಿತ !

Update: 2026-05-15 19:54 IST

ಸಿಂಧನೂರು : ಸಾಧು ವೇಷದಲ್ಲಿದ್ದ ಅಪರಿಚಿತ ವ್ಯಕ್ತಿಯೋರ್ವ ಅಂಗಡಿ ಮಾಲಕರಿಗೆ ಹೂ ನೀಡಿ, ಅರ್ಧ ತೊಲೆ ಬಂಗಾರ ಹಾಗೂ ಅಂಗಡಿಯಲ್ಲಿದ್ದ 10,500 ರೂ. ಹಣ ದೋಚಿಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಕುಷ್ಟಗಿ ಮುಖ್ಯರಸ್ತೆಯಲ್ಲಿರುವ ಸಾಯಿ ಮೆಡಿಕಲ್ ಮತ್ತು ಜನರಲ್ ಸ್ಟೋರ್ ಮಾಲಕ ವಿಷ್ಣುದತ್ತ ಮೋಹನ್ ದತ್ತ ಅವರು ಈ ಕುರಿತು ಶಹರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಸಾಧು ವೇಷ ಧರಿಸಿಕೊಂಡು ಭಿಕ್ಷುಕನಂತೆ ಸಂಚರಿಸುತ್ತಿದ್ದ ಅಪರಿಚಿತ ವ್ಯಕ್ತಿ ಅಂಗಡಿ ಮುಂಭಾಗದಲ್ಲಿದ್ದ ನೀರಿನ ಕ್ಯಾನ್ ಬಳಿ ಬಂದು ನೀರು ಕುಡಿಯಲು ಕೇಳಿದ್ದಾನೆ. ಮಾನವೀಯತೆ ದೃಷ್ಟಿಯಿಂದ ಅಂಗಡಿ ಮಾಲಕರು ಅಂಗಡಿಯೊಳಗಿನ ಫ್ರಿಜ್‌ನಲ್ಲಿದ್ದ ತಣ್ಣೀರನ್ನು ನೀಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಎರಡು ಹೂಗಳನ್ನು ಅಂಗಡಿ ಮಾಲಕರ ಕೈಗೆ ನೀಡಿ ಮಾತಿನ ಮಂತ್ರದಿಂದ ಅವರನ್ನು ಗೊಂದಲಕ್ಕೀಡಾಗಿಸಿದ್ದಾನೆ ಎನ್ನಲಾಗಿದೆ. ಬಳಿಕ ಆತ ಹೇಳಿದಂತೆ ನಡೆದುಕೊಂಡ ಅಂಗಡಿ ಮಾಲಕರ ಕೈಯಲ್ಲಿದ್ದ ಅರ್ಧ ತೊಲೆ ಬಂಗಾರದ ಆಭರಣ ಹಾಗೂ ವ್ಯಾಪಾರದ ಹಣವಾಗಿದ್ದ 10,500 ರೂ. ದೋಚಿಕೊಂಡು ಪರಾರಿಯಾಗಿದ್ದಾನೆ.

ಸ್ವಲ್ಪ ಸಮಯದ ಬಳಿಕ ಘಟನೆ ಅರಿವಿಗೆ ಬಂದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದನು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆಯಲ್ಲಿ ಭಾಗಿಯಾದ ಸಾಧು ರೂಪದ ವ್ಯಕ್ತಿಯ ಭಾವಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News