×
Ad

ರಾಯಚೂರು | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳಿಂದ ಪ್ರತಿಭಟನೆ

Update: 2026-01-27 18:44 IST

ರಾಯಚೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಬ್ಯಾಂಕ್ ಉದ್ಯೋಗಿಗಳು ಮಂಗಳವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬ್ಯಾಂಕ್‌ಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸಲಾಗುವುದು ಎಂಬ ಭರವಸೆಯನ್ನು ಈ ಹಿಂದೆ ನೀಡಲಾಗಿದ್ದರೂ, ಈ ವಿಷಯವನ್ನು ವರ್ಷಗಳಿಂದ ಬಾಕಿಯೇ ಇಡಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

2022ರಲ್ಲಿ ಸರ್ಕಾರ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸುವ ಕುರಿತು ಕೆಲಸದ ಸಮಯ ಹೆಚ್ಚಿಸುವ ಬಗ್ಗೆ ಐಎಫ್‌ಬಿಯು ಜೊತೆ ಚರ್ಚಿಸಲು ಒಪ್ಪಿಕೊಂಡಿದ್ದವು. 2023ರಲ್ಲಿ ನಡೆದ ಚರ್ಚೆಯ ಬಳಿಕ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷಗಳಷ್ಟು ಕೆಲಸದ ಸಮಯ ಹೆಚ್ಚಿಸಿ, ಉಳಿದ ಎಲ್ಲಾ ಶನಿವಾರಗಳನ್ನು ರಜೆ ಎಂದು ಘೋಷಿಸಲು ಒಪ್ಪಂದವಾಗಿದೆ. ಈ ಕುರಿತು ಸರ್ಕಾರಕ್ಕೆ ಅಧಿಕೃತ ಶಿಫಾರಸು ಸಲ್ಲಿಸಲಾದರೂ, ಕಳೆದ ಎರಡು ವರ್ಷಗಳಿಂದ ಸರ್ಕಾರದ ಅನುಮೋದನೆ ಇನ್ನೂ ಲಭಿಸಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್‌ಬಿಐ, ಎಲ್‌ಐಸಿ ಮತ್ತು ಜಿಐಸಿಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಷೇರುಪೇಟೆಗಳು ಕೂಡ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಮಾತ್ರ ಈ ಸೌಲಭ್ಯ ನೀಡದಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ಗಳಲ್ಲಿ ಈಗಾಗಲೇ 2ನೇ ಮತ್ತು 4ನೇ ಶನಿವಾರ ರಜೆಯಾಗಿರುವುದರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಸಮಯವನ್ನು ಸ್ವಲ್ಪ ಹೆಚ್ಚಿಸಿ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸಿದರೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಸರ್ಕಾರ ಕೂಡಲೇ ಈ ಕುರಿತು ತೀರ್ಮಾನ ಕೈಗೊಂಡು ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸಹ ಕಾರ್ಯದರ್ಶಿ ಕುಮಾರ ಯಗ್ಗಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಲಾವುದ್ದಿನ್, ಸೋಮಶೇಖರ, ರಾಜೇಶ್ ವಿ.ಜೆ., ಪವನ್ ಕುಮಾರ್, ಮಲ್ಲಿಕಾರ್ಜುನ, ಗಣೇಶ್, ಅಯೂಬ್ ಖಾನ್, ಸಂತೋಷ ಬಿ., ಮಾಲಾ ಸೇರಿದಂತೆ ಅನೇಕ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News