ರಾಯಚೂರು| ಬಾಕಿ ವೇತನ ಪಾವತಿಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಕಾರ್ಮಿಕರಿಂದ ಪ್ರತಿಭಟನೆ
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಯರಮರಸ್ ವೃತ್ತದ ಗ್ಯಾಂಗ್‍ಮನ್ ಕಾರ್ಮಿಕರ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ(ಟಿಯುಸಿಐ)ದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.
ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಕಳೆದ 30 ವರ್ಷಗಳಿಂದ ದಿನಗೂಲಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅವರಿಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಯರಮರಸ್ ವಲಯದ 748 ಗ್ಯಾಂಗ್‍ಮನ್ ಕಾರ್ಮಿಕರಿಗೆ ಏಪ್ರಿಲ್‍ನಿಂದ ಇಲ್ಲಿಯವರೆಗೆ ವೇತನ ಪಾವತಿ ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ನೀಡಿದಾಗಲೂ ಇಲಾಖೆಯಿಂದ ವೇತನ ಪಾವತಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ. ಅಮೀರ್ ಅಲಿ, ರಾಜ್ಯ ಉಪಾಧ್ಯಕ್ಷ ಎಂ ಗಂಗಾಧರ, ಸಂಘದ ಪ್ರಧಾನ ಕಾರ್ಯದರ್ಶಿ ಜಿ ಅಡವಿರಾವ್, ರುಕ್ಕಪ್ಪ ಮಾನ್ವಿ, ಸಂಘದ ಹಿರಿಯ ಮುಖಂಡ ರಮೇಶ್ ಕೊಟ್ನೆಕಲ್, ಶರಣಪ್ಪ ಕೌತಾಳ್, ಅಮರೇಗೌಡ ಸಿರಿವಾರ್, ರಾಮಣ್ಣ ಪೋತ್ನಾಳ್, ಸಿದ್ದನಗೌಡ ಗಿಲ್ಲಿ ಕಸ್ತೂರ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.