ಅಕ್ರಮ ಮರಳು ಗಣಿಗಾರಿಕೆ ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ಸಮನ್ವಯತೆಯಿಂದ ಕೆಲಸ ಮಾಡಲಿದೆ: ಸಚಿವ ಶರಣಪ್ರಕಾಶ್ ಪಾಟೀಲ್
ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆ ತಡೆಯಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಅಧಿಕಾರಿಗಳಿಗೆ ಸಮನ್ವಯತೆಯಿಂದ ಕೆಲಸ ಮಾಡಲು ನಿರ್ದೇಶನ ನೀಡಲಾಗುವುದು, ಅಕ್ರಮ ಗಣಿಗಾರಿಕೆ ತಡೆಯಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ದೇವದುರ್ಗ ಶಾಸಕಿ ಜಿ.ಕರೆಯಮ್ಮ ನಾಯಕ ಅವರ ಮನೆಗೆ ನುಗ್ಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಿರ್ಲಕ್ಷಿಸಿಲ್ಲ. ಈಗಾಗಲೇ ಎಫ್‍ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಯಾವುದೇ ಹೊಂದಾಣಿಕೆ ಇಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಡಿಸಿ, ಎಸ್‍ಪಿಯವರಿಗೆ ಸೂಚಿಸಲಾಗಿದೆ. ಟೆಂಡರ್ ಆಗಿರುವ ಮರಳು ಕೇಂದ್ರಗಳಿಂದ ಕಾನೂನು ಬದ್ದವಾಗಿ ವಿಲೇವಾರಿ ನಡೆಸುವಂತೆ ಸೂಚಿಸಲಾಗುತ್ತದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ನಾನು ಬೆಂಬಲಿಸುವುದಿಲ್ಲ. ಯಾರನ್ನೂ ರಕ್ಷಿಸುವೂದೂ ಇಲ್ಲ ಎಂದು ಸ್ಪಷ್ಚಪಡಿಸಿದರು.
ರಾಯಚೂರು ಶಾಖೋತ್ಪನ್ನ ಕೇಂದ್ರ ಮಾತ್ರವಲ್ಲ, ಜಿಲ್ಲೆಯಲ್ಲಿ ಏಲ್ಲಿಯೂ ಅಣುಸ್ಥಾವರ ಸ್ಥಾಪನೆಗೆ ಸಹಮತವಿಲ್ಲ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಸೂಚಿಸಲಾಗಿದೆ. ಕೇಂದ್ರದಿಂದ ಅಣುಸ್ಥಾವರ ಅಧಿಕಾರಿಗಳು ಭೇಟಿ ನೀಡಿರುವ ಕುರಿತು ಮಾಹಿತಿಯಿಲ್ಲ. ರಾಜ್ಯದೊಂದಿಗೆ ಯಾವುದೇ ಸಮಾಲೋಚನೆಯೂ ನಡೆದಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿಯಲ್ಲಿ ಅಣುಸ್ಥಾವರ ಸ್ಥಾಪಿಸುವ ಕುರಿತು ಮಾಹಿತಿ ಕೇಳಿದಾಗ ಜನರ ವಿರೋಧ ಇರುವುದಾಗಿ ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಸರಕಾರ ಅಣುಸ್ಥಾವರ ಸ್ಥಾಪಿಸುವ ಕುರಿತು ಸ್ಪಷ್ಟತೆಯಿಲ್ಲ. ಅಧಿಕಾರಿಗಳು ಭೇಟಿಯಾದ ಕುರಿತು ಮಾಹಿತಿ ಪಡೆಯಲಾಗುತ್ತದೆ ಎಂದರು.
ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು 40 ಕೋಟಿ ರೂ ವೆಚ್ಚದ ಯಂತ್ರೋಪಕರಣ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಏಮ್ಸ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮುಂದುವರೆದಿದ್ದು ಮುಖ್ಯಮಂತ್ರಿಗಳು ಮತ್ತೊಂದು ಪತ್ರ ಬರೆದು ಆಗ್ರಹಿಸಿದ್ದಾರೆ. ಮಕ್ಕಳ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸುವ ಕುರಿತು ಪ್ರಸ್ತಾವನೆಯಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ. ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಸ್ವಯಂಸೇವಾ ಸಂಸ್ಥೆಯೊಂದಿಗೆ ಸೇರಿ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿ ರೂಪುರೇಷ ರೂಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ದದ್ದಲ ಬಸನಗೌಡ, ಪರಿಷತ್ ಸದಸ್ಯ ಎ.ವಸಂತಕುಮಾರ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಿಸಿ ನಿತೀಶ್, ಎಸ್ಪಿ ಅರುಣಾಂಶ್ಷುಗಿರಿ, ಜಿ.ಪಂ ಸಿಇಒ ಈಶ್ವರ ಕಾಂದೂ, ಜುಬಿನ್ ಮಹೊಪಾತ್ರ ಉಪಸ್ಥಿತರಿದ್ದರು.