ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಸೈಕ್ಲಾಥಾನ್ ಆಯೋಜನೆ
ರಾಯಚೂರು : ರಾಯಚೂರು ಜಿಲ್ಲಾ ಉತ್ಸವದ ಕ್ಯಾಲೆಂಡರ್ ಅನ್ವಯ ಜ.27ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಸೈಕ್ಲಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗ್ಗೆ 6 ಗಂಟೆಯಿಂದಲೇ ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದತ್ತ ವೈದ್ಯರು, ಸೈಕ್ಲಿಂಗ್ ಅಸೋಸಿಯೇಷನ್ ಸದಸ್ಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ತಮ್ಮ ನೆಚ್ಚಿನ ಸೈಕಲ್‌ಗಳೊಂದಿಗೆ ಆಗಮಿಸಿ ಉತ್ಸಾಹದಿಂದ ಸೈಕಲ್ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸೈಕಲ್ ತುಳಿಯುತ್ತ ಸೈಕ್ಲಾಥಾನ್‌ಗೆ ಹಸಿರು ನಿಶಾನೆ ತೋರಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಸೈಕಲ್ ಸವಾರಿ ಬಸವೇಶ್ವರ ವೃತ್ತ, ಜಿಲ್ಲಾ ಪಂಚಾಯತ್, ಕನಕದಾಸ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಯರಮರಸ್ ಬೈಪಾಸ್ ಮೂಲಕ ಯಕ್ಲಾಸಪೂರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾರ್ಗವಾಗಿ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿತು.
ಸೈಕಲ್ ಸವಾರರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೈಕಲ್ ಸವಾರರ ಮುಂದೆ ಪೊಲೀಸ್ ಕಾನ್ವೆ ವ್ಯವಸ್ಥೆ ಮಾಡಲಾಗಿತ್ತು.
ಈ ಸ್ಪರ್ಧೆಯಲ್ಲಿ ಬೆಲಂ ಪ್ರಕಾಶ್ ಅವರು ಪ್ರಥಮ ಬಹುಮಾನ, ರಾಘವೇಂದ್ರ ಗುಪ್ತ ದ್ವಿತೀಯ ಬಹುಮಾನ ಮತ್ತು ಸಣ್ಣ ವೀರೇಶ ಅವರು ತೃತೀಯ ಬಹುಮಾನ ಗಿಟ್ಟಿಸಿದರು. ಈ ಸ್ಪರ್ಧೆಯಲ್ಲಿ ಏಕೈಕ ಮಹಿಳಾ ಪಟುವಾಗಿ ಡಾ.ಶಿಲ್ಪ ಅವರು ಭಾಗಿಯಾಗಿ ಗಮನ ಸೆಳೆದರು. ಪ್ರಥಮ ಸ್ಥಾನಕ್ಕೆ 10 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 3 ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆ :
ಸೈಕ್ಲಾಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಹಸನ್, ಶ್ರೇಯಸ್, ಗಣೇಶ್ ಮಿಶ್ರಬ್, ಮಹಮ್ಮದ್ ಆಸಂಖಾನ್, ದೇವರಾಜ್, ಮನೀಶ್ ಹಾಗೂ ಶ್ರೇಯಾಂಕ ಅವರು ಸೈಕಲ್ ಸವಾರಿ ಮಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ್ ವರ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ. ಬಡಿಗೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯಶಂಕರ್, ಎನ್‌ವಿಡಿ ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ, ಲಿವಿಂಗ್ ಆಫ್ ಆರ್ಟ್ ಸಂಸ್ಥೆಯ ಮಲ್ಲಿಕಾರ್ಜುನ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪ, ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಸವರಾಜ, ಕೃಷ್ಣ ತುಂಗೆ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.