ರಾಯಚೂರು| ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ
ರಾಯಚೂರು: ರಾಜ್ಯದಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್ ಸೇರಿ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮಹಿಳೆಯರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ಪ್ರತಿಭಟನಾ ನಿರತ ಮಹಿಳೆಯರು ಬೀರು ಬೇಡ ನೀರು ಬೇಕು, ಬೀರ್ ಬೇಡ ಶಿಕ್ಷಣ ಬೇಕು ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕ ಬಾರಿ ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮದ್ಯ ನಿಷೇಧ ಆಂದೋಲನದ ವತಿಯಿಂದ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ಹೋರಾಡುತ್ತಾ ಬಂದರೂ ಸರಕಾರ ಮದ್ಯ ನಿಷೇಧಕ್ಕೆ ಮುಂದಾಗುತ್ತಿಲ್ಲ. ನವೆಂಬರ್ 25ರಂದು ಹೋರಾಟಕ್ಕೆ ಮಣಿದ ಮುಖ್ಯಮಂತ್ರಿಗಳು ಕಾಲಾವಕಾಶ ಕೊಡಿ ಎಂದು ಕೇಳಿದ್ದರೂ, ಆದರೇ ಭರವಸೆ ಈಡೇರಿಸದೆ ಹುಸಿಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಮಾರಾಟಕ್ಕೆ ಪರವಾನಿಗೆ ಹೊಂದಲು ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರಕಾರ ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು ಗ್ರಾಮ ಸಭೆಯಲ್ಲಿ ಕನಿಷ್ಠ ಶೇಕಡಾ 20 ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಗ್ರಾಮಸಭೆಯ ಈ ಠರಾವಿಗೆ ಮಾನ್ಯತೆ ನೀಡಲೇ ಬೇಕು. ಹಾಗೆ ನಮ್ಮಲ್ಲೂ ಈ ಅಂಶವನ್ನು ಪಂಚಾಯತ್ ರಾಜ್ ಕಾನೂನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ ಅದಕ್ಕಿಂತ ಹೆಚ್ಚು ಮನೆ ಮನೆಗಳಲ್ಲಿ, ಪಾನ್ ಶಾಪ್, ಕಿರಾಣ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ ಕೊಡಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈಗಾಗಲೆ ಹೆಚ್ಚುವರಿ ಸಮಿತಿಗಳು ಮಾಡುವ ಅವಕಾಶ ಇದೆ. ಕೂಡಲೇ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಧ್ಯಪಾನ ನಿಷೇಧ ಆಂದೋಲನದ ಮುಖಂಡರಾದ ವಿರೂಪಮ್ಮ, ಚಂದ್ರಕಲಾ, ಕವಿತಾ, ಲಕ್ಷ್ಮಿ, ಕಾಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.