×
Ad

ರಾಯಚೂರು | ಅತಿವೃಷ್ಟಿಯಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಘೋಷಿಸಬೇಕು: ಶಾಸಕ ಹಂಪನಗೌಡ ಬಾದರ್ಲಿ

Update: 2025-09-27 22:41 IST

ರಾಯಚೂರು : ಕಳೆದ 70 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಷ್ಟು ಪ್ರಮಾಣದ ಮಳೆ ಏಕಕಾಲದಲ್ಲಿ ಬಂದಿರುವುದನ್ನು ನಾವು ಕಂಡಿಲ್ಲ. ಈ ಅತಿವೃಷ್ಟಿಯಿಂದ ಸಿಂಧನೂರಿನ ಹತ್ತಿ, ಭತ್ತ, ತೊಗರಿ, ಜೋಳ, ಸೂರ್ಯಕಾಂತಿ ಬೆಳೆಗಳು ಹಾನಿಗೊಳಗಾಗಿವೆ. ಸರ್ಕಾರ ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಘೋಷಿಸಬೇಕು ಎಂದು ಶಾಸಕರಾದ ಹಂಪನಗೌಡ ಬಾದರ್ಲಿ ಮನವಿ ಮಾಡಿದರು.

ಅವರು ಸೆ.27ರಂದು ಸಿಂಧನೂರಿನ ಸತ್ಯ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಂಧನೂರಿಗೆ ಮಂಜೂರಾದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಯುವಕರಿಗಾಗಿ ಕೌಶಲ ತರಬೇತಿ ಕೇಂದ್ರ, ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಮಹಾವಿದ್ಯಾಲಯ ಕಟ್ಟಡ ಭೂಮಿಪೂಜೆ, ಜ್ಯೂನಿಯರ್ ಕಾಲೇಜು ಕಟ್ಟಡ ಶಂಕುಸ್ಥಾಪನೆ, ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ – ಇವು ಸಿಂಧನೂರಿನ ಇತಿಹಾಸದಲ್ಲಿ ದಾಖಲಾಗುವ ಸಾಧನೆಗಳು ಎಂದರು.

ಎಡದಂಡೆ ಕಾಲುವೆ ದುರಸ್ತಿ ಕಾರ್ಯಗಳಿಗೆ ತುಂಡುತುಂಡಾಗಿ ಅನುಮತಿ ನೀಡಬೇಕು. ಪಾಪಯ್ಯ ಕಾಲುವೆಯಿಂದ ಕನಿಷ್ಠ 4,700 ಕ್ಯುಸೆಕ್ ನೀರು ಹರಿಯಲು 90 ಕೋಟಿ ರೂ. ಮಂಜೂರಾತಿ ಮಾಡಿದರೆ ಮಾನವಿ ಮತ್ತು ರಾಯಚೂರು ತಾಲೂಕಿನ 6 ಲಕ್ಷ ಎಕರೆ ಜಮೀನಿಗೆ ನೀರು ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅವರು ತುಂಗಭದ್ರಾ ಡ್ಯಾಮ್ ಗೇಟ್ ದುರಸ್ತಿ ಹಾಗೂ ಹೊಸ ಶೆಲ್ಟರ್‌ಗಳ ನಿರ್ಮಾಣ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News