ರಾಯಚೂರು | ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ: ಲತೀಫ್ ಖಾನ್ ಪಠಾಣ ಆರೋಪ
ರಾಯಚೂರು: ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜದ ಹಿತಕ್ಕಾಗಿ ನಿಲ್ಲದೆ, ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಲತೀಫ್ ಖಾನ್ ಪಠಾಣ ಆರೋಪಿಸಿದರು.
ತಾಲೂಕಿನ ಮುದಗಲ್ ಪಟ್ಟಣದ ಮಸ್ಕಿ ರಸ್ತೆಯ ಖದೀಜಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಎಐಎಂಐಎಂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳದೇ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಎಐಎಂಐಎಂ ಪಕ್ಷವನ್ನು ಬೆಂಬಲಿಸುವ ಸಮಯ ಬಂದಿದೆ ಎಂದು ಹೇಳಿದರು.
ಹೋಬಳಿ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮುದಗಲ್ ಹೋಬಳಿಗೆ ಎಐಎಂಐಎಂ ನೂತನ ಅಧ್ಯಕ್ಷರಾಗಿ ಅಬೇದ್ ಬೆಳ್ಳಿಕಟ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಮುಸ್ಲಿಂ ಸಮಾಜ ಗುಲಾಮಗಿರಿ ಮನೋಭಾವವನ್ನು ಬಿಟ್ಟು ಸ್ವತಂತ್ರವಾಗಿ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರಿಗೆ ಸಮಾಜದ ಬಗ್ಗೆ ನಿಜವಾದ ಕಾಳಜಿ ಇದೆ. ರಾಜ್ಯ ಸರ್ಕಾರ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ ಎಂದು ಟೀಕಿಸಿದರು. ಮುಂಬರುವ ಮುದಗಲ್ ಪುರಸಭೆ ಚುನಾವಣೆಯಲ್ಲಿ 23 ವಾರ್ಡುಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ರಾಜಕೀಯವಾಗಿ ಮುಂದೆ ಬರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಬ್ಬಿರ್ ಅಹ್ಮದ್ ಬೆಳಗಾವಿ, ಯುವ ಘಟಕದ ಅಧ್ಯಕ್ಷ ಶಾರೂಕ್ ಪಟೇಲ್, ಮಹ್ಮದ್ ರಫಿ ಖುರೇಷಿ, ಯುವ ಘಟಕದ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್, ಮುದಗಲ್ ಘಟಕದ ಅಧ್ಯಕ್ಷ ಅಬೇದ್ ಬೆಳ್ಳಿಕಟ್ ಮಾತನಾಡಿದರು. ಮೌಲಾನಾ ಹಾಸೀಂ, ಮೌಲಾನಾ ಅತುಲ್ಲಾ ಖಾದ್ರಿ, ರೋಷನ್ ಜಹಾ, ನೂರು, ಶೇಖ್ ಚಾಂದ್ ಕಡ್ಡಿಪುಡಿ, ಮಹ್ಮದ್ ಎಂಟುಬಂಡಿ ಹಾಗೂ ಶಾರೂಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.