×
Ad

ದೇವದುರ್ಗ | ಕ್ಷಮೆ‌ ಕೇಳದಿದ್ದರೆ ಮಾನನಷ್ಟ‌ ಮೊಕದ್ದಮೆ ಹೂಡುವೆ : ರಮೇಶ ರಾಮನಾಳ

Update: 2026-01-22 18:22 IST

ದೇವದುರ್ಗ: "ಶ್ರೀನಿವಾಸ ನಾಯಕ್ ಒಬ್ಬ ಅಕ್ರಮ ಮರಳು ದಂಧೆಕೋರ ಎಂಬ ವಿಷಯ ಇಡೀ ಜಿಲ್ಲೆಗೆ ತಿಳಿದಿದೆ. ಹಫ್ತಾ ವಸೂಲಿ ಮಾಡುವುದು ನಾವಲ್ಲ, ಬದಲಾಗಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಮರಳು ಮಾಫಿಯಾ ಮಾಡುತ್ತಿರುವುದು ಅವರೇ" ಎಂದು ಜೆಡಿಎಸ್ ಮುಖಂಡ ರಮೇಶ್ ರಾಮನಾಳ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ನಾಯಕ್ ಅವರು ಮಾಜಿ ಸಂಸದ ಬಿ.ವಿ. ನಾಯಕ್ ಹಾಗೂ ರಾಜಶೇಖರ್ ನಾಯಕ್ ಅವರ ಹೆಸರು ಬಳಸಿಕೊಂಡು ಅಕ್ರಮ ಮರಳು ಸಾಗಣೆ ಮಾಡುವ ಮೂಲಕ 20 ಕೋಟಿ ರೂ. ವೆಚ್ಚದ ಮನೆ ಕಟ್ಟಿಸಿಕೊಂಡಿದ್ದಾರೆ. ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ದಂಧೆಕೋರರಿಂದ ಹಣ ವಸೂಲಿ ಮಾಡುವಷ್ಟು ಕೆಳಮಟ್ಟಕ್ಕೆ ಇಳಿದಿಲ್ಲ ಎಂದು ಹೇಳಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯ ಗೋವಿಂದರಾಜ ಮಾತನಾಡಿ, ಬಿ.ವಿ.ನಾಯಕ್ ಕುಟುಂಬದ ರಾಜಕಾರಣ ಆರಂಭವಾಗಿದ್ದೇ ನಮ್ಮ ತಾತನಿಂದ. ಅವರನ್ನು ಗ್ರಾಮ ಪಂಚಾಯತ್‌ನಿಂದ ಸಂಸದರವರೆಗೆ ಬೆಳೆಸಿದ್ದು ನಾವೇ. 2016ರಲ್ಲಿ ಶ್ರೀನಿವಾಸ ನಾಯಕ್ ಅವರನ್ನು ಬಿ.ವಿ. ನಾಯಕ್ ಬಳಿ ಕರೆತಂದು ರಾಜಕೀಯ ಪ್ರವೇಶ ಮಾಡಿಸಿದ್ದೇ ನಾನು. ಆದರೆ ಇಂದು ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾ, ಮರಳು ದರೋಡೆ ಮಾಡುತ್ತಾ ಅಹಂಕಾರ ಪ್ರದರ್ಶಿಸುತ್ತಿದ್ದಾರೆ. ಅವರ ಕುಟುಂಬದ ದುರಹಂಕಾರಕ್ಕೆ ಬೇಸೆತ್ತು ಜನರು ಇಂದು ಕರೆಮ್ಮ ಅವರನ್ನು ಆರಿಸಿ ತಂದಿದ್ದಾರೆ ಎಂದರು.

ಶಾಸಕಿ ಕರೆಮ್ಮ ಅವರು ಅಧಿಕಾರಕ್ಕೆ ಬಂದ ಮೇಲೆ ತಾಲೂಕು ಶಾಂತಿಯ ತೋಟದಂತಾಗಿದೆ ಎಂದು ಅವರು ಶ್ಲಾಘಿಸಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಮಹಿಳಾ ತಾಲೂಕು ಅಧ್ಯಕ್ಷೆ ರೇಣುಕಾ ಸ್ವಾಮಿ, ನನ್ನ ಮೇಲೆ 15 ಪ್ರಕರಣಗಳಿವೆಯೆಂದು ಹಾಗೂ ಮಟ್ಕಾ ದಂಧೆ ಮಾಡುತ್ತಿದ್ದೇನೆಂದು ಶ್ರೀನಿವಾಸ ನಾಯಕ್ ಮಾಡಿರುವ ಆರೋಪ ಸಾಬೀತುಪಡಿಸಿದರೆ ನಾನೇ ಗಡಿಪಾರಾಗಲು ಸಿದ್ಧ. ಒಬ್ಬ ಹೆಣ್ಣುಮಗಳು ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸದೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆ ಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹನುಮಂತರಾಯ ಚಿಂತಲಕುಂಟ, ಇಸಾಕ್ ಮೇಸ್ತ್ರಿ, ಮಯೂರ ಸ್ವಾಮಿ, ರಂಗಮ್ಮ ಇರಬಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News