ಶಾಸಕಿ ಕರೆಮ್ಮ ನಾಯಕರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾ ಉತ್ಸವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ : ಎಂ.ವಿರೂಪಾಕ್ಷಿ
ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಅವರ ಮನೆಗೆ ನುಗ್ಗಿ ಅಕ್ರಮ ಮರಳು ದಂಧೆಕೋರರು ಜೀವಬೆದರಿಕೆ ಹಾಕಿರುವ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ, ಫೆ.5ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಉತ್ಸವದಲ್ಲಿ ಜೆಡಿಎಸ್ ವತಿಯಿಂದ ಕಪ್ಪು ಪಟ್ಟಿ ಪ್ರದರ್ಶನ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ವಿರೂಪಾಕ್ಷಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಗೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಪೊಲೀಸರೇ ಅಕ್ರಮ ಮರಳು ದಂಧೆಗೆ ರಕ್ಷಕರಂತೆ ವರ್ತಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದರು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗುವ ಲಾರಿ, ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳಿಂದ ಹಣ ವಸೂಲಿ ಮಾಡಿ, ಪಿಎಸ್‌ಐಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದರು.
ಪೊಲೀಸರ ಭಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಶಾಸಕರ ಮನೆಗೆ ಹೋಗಿ ಬೆದರಿಕೆ ಹಾಕುವ ಮಟ್ಟಿಗೆ ಅಕ್ರಮ ದಂಧೆ ಬೆಳೆದಿದೆ. ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದರು.
ಶಾಸಕಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳು ತಮ್ಮನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಶಾಸಕಿ ಪುತ್ರನೂ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಅಕ್ರಮ ನಡೆಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಶಾಸಕಿ ಕರೆಮ್ಮ ಅವರು ಆರಂಭದಿಂದಲೂ ಅಕ್ರಮ ಮರಳು ದಂಧೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೀನಿವಾಸ ನಾಯಕ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿರೂಪಾಕ್ಷಿ ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರ ಹಿಂಬಾಲಕರೇ ಅಕ್ರಮ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ರಮ ಮರಳು ದಂಧೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಆರೋಪಿ ಶ್ರೀನಿವಾಸ ನಾಯಕ ನಿರ್ಭಯವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಕಾನೂನು ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಎಸ್‌ಪಿ ಅವರೇ ಅಕ್ರಮ ಮರಳು ಸಾಗಿಸುವ ಟಿಪ್ಪರ್‌ಗಳ ಬಳಿ ಹೋಗಬೇಡಿ ಎಂದು ಸಲಹೆ ನೀಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಐಜಿಪಿ ಹಸ್ತಕ್ಷೇಪ ಮಾಡಿ ಆರೋಪಿಗಳನ್ನು ಬಂಧಿಸಿ, ಜಿಲ್ಲೆಯಾದ್ಯಂತ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಣ್ಣ ನರಸಿಂಹನಾಯಕ, ನಾಗರಾಜ ನಾಯಕ, ರಾಮಕೃಷ್ಣ, ನರಸಪ್ಪ ಆಶಾಪುರು, ರಾಜು ಸಂಗಟಿ, ರಾಮು, ಅಮರೇಶ ಪಾಟೀಲ್ ಹಾಗೂ ವಿಜಯಕುಮಾರ ಉಪಸ್ಥಿತರಿದ್ದರು.