Raichur | ʼನಮ್ಮ ಶಾಸಕರು ಕಾಣೆಯಾಗಿದ್ದಾರೆ’ : ಹಟ್ಟಿ ಪಟ್ಟಣದಲ್ಲಿ ಪೋಸ್ಟರ್ ಹಾಕುವ ಮೂಲಕ ಆಕ್ರೋಶ
ರಾಯಚೂರು: ಜಿಲ್ಲೆಯ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ, ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಹಾಕುವ ಮೂಲಕ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾತ್ರಿ ಹಟ್ಟಿ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ “ನಮ್ಮ ಶಾಸಕರು ಕಾಣೆಯಾಗಿದ್ದಾರೆ, ಹುಡುಕಿಕೊಡಿ”, “ಹಟ್ಟಿಗೆ ಇವರ ಕೊಡುಗೆ ಶೂನ್ಯ” ಎಂಬ ಬರಹಗಳಿರುವ ಪೋಸ್ಟರ್ ಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್ ಗಳನ್ನು ಯಾರು ಅಳವಡಿಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್‌ಗಳ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಅನೇಕರು ಶೇರ್ ಮಾಡುವ ಮೂಲಕ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬೆಂಬಲ ಸೂಚಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ಹೋರಾಟಗಾರರಾದ ರಮೇಶ್ ವೀರಾಪುರ ಹಾಗೂ ಲಿಂಗರಾಜ ಅವರು, ಲಿಂಗಸುಗೂರು ಕ್ಷೇತ್ರದ ಶಾಸಕರಾಗಿರುವ ಮಾನಪ್ಪ ವಜ್ಜಲ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಹಟ್ಟಿ ಪಟ್ಟಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿಯೇ ಉಳಿದಿದೆ ಎಂದು ಆರೋಪಿಸಿದರು.
ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು, ಪದವಿ ಕಾಲೇಜಿನ ಕೊರತೆ, ಸಮರ್ಪಕ ಆಸ್ಪತ್ರೆ ಸೌಲಭ್ಯಗಳ ಅಭಾವ ಹಾಗೂ ಸ್ವಚ್ಛತೆಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಇಂದಿಗೂ ಪರಿಹಾರ ಕಂಡಿಲ್ಲ. ಹಲವು ವರ್ಷಗಳಿಂದ ಶಾಸಕರು ಹಟ್ಟಿ ಪಟ್ಟಣಕ್ಕೆ ಭೇಟಿ ನೀಡಿಲ್ಲ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಅವರು ಬೆಂಗಳೂರು ಹಾಗೂ ತಮ್ಮ ನಿವಾಸದಲ್ಲಿ ಮಾತ್ರ ಸೀಮಿತರಾಗಿದ್ದು, ಜನರಿಂದ ದೂರವಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.