×
Ad

ರಾಯಚೂರು | ಮಳೆಯಿಂದ ಬೆಳೆ ನಷ್ಟ : ಪರಿಹಾರ ನೀಡುವಂತೆ ರೈತರಿಂದ ಪ್ರತಿಭಟನೆ

Update: 2025-11-21 18:59 IST

ರಾಯಚೂರು: ಹತ್ತಿ, ಮೆಣಸಿನಕಾಯಿ, ಭತ್ತ ಸೇರಿದಂತೆ ಇತರೆ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ಘೋಷಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.  

ಜಿಲ್ಲೆಯಲ್ಲಿ ಹತ್ತಿ ಬೆಳೆ ವ್ಯಾಪಕವಾಗಿ ಹೆಚ್ಚಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬರುತ್ತಿದೆ. ಪ್ರತಿ ಕ್ವಿಂಟಾಲ್‌ ಹತ್ತಿಗೆ ಈಗ ರೂ. 6,500 ರಿಂದ 7,000 ರೂಪಾಯಿವರೆಗೆ ಮಾತ್ರ ದರ ಸಿಗುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ರೂ. 8110/- ಇದ್ದರೂ, ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳ ಭಾರೀ ಭ್ರಷ್ಟಾಚಾರದ ಪರಿಣಾಮವಾಗಿ ರೈತರಿಗೆ ದರ ಲಭಿಸುತ್ತಿಲ್ಲ” ಎಂದು ಸಂಘದ ಮುಖಂಡರು ಆರೋಪಿಸಿದರು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹತ್ತಿ, ಭತ್ತ, ಮೆಣಸಿನಕಾಯಿ, ಜೋಳ, ತೊಗರಿ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬಿತ್ತಿದ್ದಾರೆ. ಆದರೆ ಅತಿಯಾದ ಮಳೆಯಿಂದಾಗಿ ಅತೀವೃಷ್ಟಿ ಸಂಭವಿಸಿ, ರೈತರ ಬೆಳೆಗಳಿಗೆ ಭಾರೀ ನಷ್ಟವಾಗಿದೆ. ಈ ಕುರಿತು ರೈತ ಸಂಘ ಸರಕಾರದ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳು ಸ್ವತಃ ವೈಮಾನಿಕ ಸಮೀಕ್ಷೆ ನಡೆಸಿ, ವಿವಿಧ ಬೆಳೆಗಳಿಗೆ ಅನುಗುಣವಾಗಿ ಪರಿಹಾರದ ಮೊತ್ತವನ್ನು ಘೋಷಿಸಿದ್ದಾರೆ. ಹತ್ತಿ ಖರೀದಿಗಾಗಿ ನೋಂದಣಿ ಮಾಡಿಕೊಳ್ಳುವುದೇ ರೈತರಿಗೆ ಸವಾಲಾಗಿದ್ದು, ಸ್ಲಾಟ್ ಬುಕ್ಕಿಂಗ್ ಕೇವಲ 30 ಸೆಕೆಂಡ್‍ಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಬಹುತೇಕ ರೈತರು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ತಕ್ಷಣ ಸರಿಪಡಿಸುವಂತೆ ಅವರು ಆಗ್ರಹಿಸಿದರು. ಹತ್ತಿ, ತೊಗರಿ, ಭತ್ತ ಮತ್ತು ಜೋಳ ಖರೀದಿ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತೆರೆಯಬೇಕು ಹಾಗೂ ರೈತರ ಖಾತೆಗೆ ಹಣವನ್ನು ಕಾಲಮಿತಿಯೊಳಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. 

ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ನಡೆದ ಕಾಮಗಾರಿಗಳು ತೀರಾ ಕಳಪೆಯಾಗಿದ್ದು,ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ದೊಡ್ಡ ಬಸನಗೌಡ ಬಲ್ಲಟಗಿ, ಸುಗೂರಯ್ಯ ಆರ್.ಎಸ್. ಮಠ, ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಲೀಪಾಟೀಲ್, ಲಿಂಗಾರೆಡ್ಡಿ ಪಾಟೀಲ್, ವೀರೇಶ ಗವಿಗಟ್, ಸಿದ್ದಯ್ಯಸ್ವಾಮಿ ಗೋರ್ಕಲ್, ಹೆಚ್. ಶಂಕ್ರಪ್ಪ, ದೇವರಾಜ ನಾಯಕ, ಶರಣಪ್ಪ, ಉಮಾಪತಿ ಗೌಡ, ಬೂದಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News