ರಾಯಚೂರು ಜಿಲ್ಲೆಯಲ್ಲಿ ತೀವ್ರ ಶೀತ ಗಾಳಿ : ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿಗಳ ಸಲಹೆ
ನಿತೀಶ್ ಕೆ.
ರಾಯಚೂರು: ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಡಿ.20 ರಿಂದ 21ರವರೆಗೆ ರಾಯಚೂರು ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತ ಗಾಳಿ ಬೀಸುವ ಸಾಧ್ಯತೆಯಿರುತ್ತದೆ. ಹಾಗೂ ಸಾಮಾನ್ಯ ತಾಪಮಾನಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಆಗುವ ಸಾಧ್ಯತೆ ಇರುವ ಕಾರಣ ಮುಂಜಾಗೃತ ಕ್ರಮವಾಗಿ ಎಲ್ಲಾ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಲಹೆ ನೀಡಿದ್ದಾರೆ.
ಏನು ಮಾಡಬೇಕು : ಸಾರ್ವಜನಿಕರು ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ವಾಕಿಂಗ್ ಬರುವಾಗ ಮುನ್ನೆಚ್ಚರಿಕೆ ವಹಿಸಿಬೇಕು. ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬರಬಾರದು. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ಟೇಟರ್, ಜಾಕೇಟ್, ಉಲನ್ ಟೋಪಿ, ಕಾಲುಕುಬುಸ, ಕೈಗವ ಧರಿಸಬೇಕು. ಹಿರಿಯರಿಗೆ ಹಾಗೂ ಮಕ್ಕಳನ್ನು ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬಿಡದಿರಲು ಹಾಗೂ ಅವರ ಆರೋಗ್ಯದ ಕಡೆ ಗಮನ ಹರಿಸಬೇಕು.
ಜ್ವರ, ಉಸಿರು ಕಟ್ಟಿಕೊಳ್ಳುವ, ಮೂಗು ಅಥವಾ ಮೂಗಿನ ರಕ್ತಸ್ರಾವದಂತಹ ವಿವಿಧ ಕಾಯಿಲೆಗಳು ಸಾಮಾನ್ಯವಾಗಿ ಶೀತಕ್ಕೆ ಧೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಲ್ಬಣಗೊಳ್ಳುತ್ತದೆ. ಈ ರೀತಿಯ ರೋಗಲಕ್ಷಣಗಳಿಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಶೀತ ಅಲೆಯು ನಿಮ್ಮ ಪ್ರದೇಶದಲ್ಲಿ ಇದೆಯೇ ಎಂದು ತಿಳಿಯಲು ರೇಡಿಯೊವನ್ನು ಆಲಿಸಿ, ಟಿವಿ ವೀಕ್ಷಿಸಿ. ಸ್ಥಳೀಯ ಹವಾಮಾನ ಮುನ್ಸೂಚನೆಗಾಗಿ ಪತ್ರಿಕೆಗಳನ್ನು ಓದಬೇಕು. ತುರ್ತು ಸಾಮಗ್ರಿಗಳನ್ನು ಸಿದ್ಧವಾಗಿಡಬೇಕು.
ದೇಹದ ಉಷ್ಣತೆಯ ಸಮತೋಲನವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವನ್ನು ಸೇವಿಸಿ ಬಿಸಿ ದ್ರವಗಳನ್ನು ನಿಯಮಿತವಾಗಿ ಕುಡಿಯಿರಿ, ಏಕೆಂದರೆ ಇದು ಶೀತದ ವಿರುದ್ಧ ಹೋರಾಡಲು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ.
ಏನು ಮಾಡಬಾರದು: ಶೀತಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಮದ್ಯಪಾನ ಮಾಡಬೇಡಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ವಾಸ್ತವವಾಗಿ ನಿಮ್ಮ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ವಿಶೇಷವಾಗಿ ಕೈಯಲ್ಲಿ ಇದು ಲಘೋಷ್ಣತೆಯ ಅಪಾಯವನ್ನು ಹೆಚ್ಚಿಸುತ್ತದೆ.
ನಡುಗುವುದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ದೇಹವು ಶಾಖವನ್ನು ಕಳೆದುಕೊಳ್ಳುವ ಮೊದಲ ಸಂಕೇತವಾಗಿರುತ್ತದೆ. ಆದ್ದರಿಂದ ಮನೆಯೊಳಗೆ ವಿಶ್ರಾಂತಿ ಪಡೆಯಿರಿ. ಸಂಪೂರ್ಣವಾಗಿ ಎಚ್ಚರಗೊಳ್ಳದ ಹೊರತು ಪೀಡಿತ ವ್ಯಕ್ತಿಗೆ ಯಾವುದೇ ದ್ರವವನ್ನು ನೀಡಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.