×
Ad

ವೈಟಿಪಿಎಸ್ ನಲ್ಲಿ ಕಲ್ಲಿದ್ದಲು ಕಳ್ಳತನ ಪ್ರಕರಣ : ಒವರ್ ಮ್ಯಾಕ್ ಕಂಪನಿ ವಿರುದ್ದ ಎಫ್‌ಐಆರ್‌ ದಾಖಲಿಸಲು ಶಾಸಕ ಡಾ.ಶಿವರಾಜ ಪಾಟೀಲ್ ಒತ್ತಾಯ

Update: 2025-12-18 20:12 IST

ರಾಯಚೂರು: ಯರಮರಸ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರ(ವೈಟಿಪಿಎಸ್‍)ದಲ್ಲಿ ನಡೆದಿರುವ ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಪವರ್ ಮ್ಯಾಕ್ ಕಂಪನಿಯ ವಿರುದ್ದ ಕೇಸ್ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಆಗ್ರಹಿಸಿದ್ದು, ಎರಡನೇ ಚಾರ್ಜ್‌ಶೀಟ್‍ನಲ್ಲಿ ಸೇರ್ಪಡೆ ಮಾಡಲು ಸೂಚನೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಸರ್ಕಾರದ ಗಮನಸೆಳೆದು ವೈಟಿಪಿಎಸ್‍ನಲ್ಲಿ ಕಲ್ಲಿದ್ದಲು ಅಕ್ರಮ ಕಳ್ಳತನ ನಡೆಯುತ್ತಿದೆ. ಪ್ರತಿದಿನ 30 ರಿಂದ 40 ಲಕ್ಷ ರೂ. ಮೌಲ್ಯದ ಕಳ್ಳತನ ನಡೆದಿದೆ. ಆದರೆ ವೈಟಿಪಿಎಸ್ ಅಧಿಕಾರಿಗಳು ಗುರುರಾಘವೇಂದ್ರ ಏಜೆನ್ಸಿ ಮತ್ತು ಯರಮರಸ್ ಸ್ಟೇಷನ್ ಮಾಸ್ತರ ವಿರುದ್ದ ಮಾತ್ರ ಕೇಸ್ ದಾಖಲಿಸಿದ್ದಾರೆ. ಕಲ್ಲಿದ್ದಲು ಸ್ವಚ್ಚತೆ, ನಿಗಧಿತ ಕಲ್ಲಿದ್ದಲು ಪಡೆಯುವುದು ಪವರ್ ಮ್ಯಾಕ್ ಅಧಿಕಾರಿಗಳ ಹೊಣೆ. ಕಳ್ಳತನಕ್ಕೆ ಪವರ್ ಮ್ಯಾಕ್ ಕಂಪನಿಯೇ ನೇರಹೊಣೆಯಾಗಿದ್ದರಿಂದ ಕಂಪನಿ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಬೇಕು ಮತ್ತು ಪವರ ಮ್ಯಾಕ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್‌ ಅವರು ವೈಟಿಪಿಎಸ್‍ನಲ್ಲಿ 120ಮೆಟ್ರಿಕ್ ಟನ್ ಕಲ್ಲಿದ್ದಲ್ ಕಳ್ಳತನ ನಡೆದಿರುವ ಪ್ರಕರಣದ ಕುರಿತು ಕೇಸ್ ದಾಖಲಾಗಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಡಿ.23 ರಂದು ವಿಚಾರಣೆ ನಿಗಧಿಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುದರಿಂದ ಎರಡನೇ ಚಾರ್ಜ್‌ಶೀಟ್ ಹಾಕುವ ಅವಕಾಶವಿದೆ. ಪೊಲೀಸರು ನಡೆಸಿರುವ ತನಿಖೆಯಲ್ಲಿ ಪವರ್ ಮ್ಯಾಕ್ ಕಂಪನಿಯ ಉಲ್ಲೇಖವಿಲ್ಲ. ಸಾಧ್ಯವಾದರೆ ಎರಡನೇ ಚಾರ್ಜಶೀಟ್ ಸಲ್ಲಿಸಿ ಪವರ್ ಮ್ಯಾಕ್ ಕಂಪನಿ ವಿರುದ್ದವೂ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಲು ರಾಯಚೂರು ಪೊಲೀಸರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ವೈಟಿಪಿಎಸ್ ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ. ನಿರಂತರವಾಗಿ ಕಲ್ಲಿದ್ದಲು ಕಳ್ಳತನ ನಡೆಯುತ್ತಿದ್ದು, ಪ್ರಕರಣ ಮುಚ್ಚಿ ಹಾಕಲು ಕೆಲವೇ ಕೆಲ ಅಧಿಕಾರಿಗಳ ವಿರುದ್ದ ಮಾತ್ರ ಕೇಸ್ ದಾಖಲಿಸಲಾಗಿದೆ. ಡಿ.19 ರಂದು ಪ್ರಕರಣ ನಡೆದಿದ್ದರೂ ದೂರು ದಾಖಲಿಸಲು ವೈಟಿಪಿಎಸ್ ಅಧಿಕಾರಿಗಳು ಐದು ದಿನ, ಪೊಲೀಸರು ಎರಡು ದಿನ ಸಮಯತೆಗೆದುಕೊಂಡು ಒಲ್ಲದ ಮನಸ್ಸಿನಿಂದಲೇ ಕೇಸ್ ದಾಖಲಿಸಿದ್ದಾರೆ. ಸರಬರಾಜ ಆಗುವಕಲ್ಲಿದ್ದಲು ಸ್ವಚ್ಚತೆ, ಗುಣಮಟ್ಟ ಪಡೆಯುವುದು ಪವರ್ ಮ್ಯಾಕ್ ಕಂಪನಿಯ ಹೊಣೆಯಾಗಿದೆ ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು.

ಪ್ರಕರಣದ ಕುರಿತಂತೆ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News