ರಾಯಚೂರು | ಬೀದಿಬದಿ ವ್ಯಾಪಾರಿಯ ಕೊಲೆ : ಪ್ರಕರಣ ದಾಖಲು
ರಾಯಚೂರು : ದುಷ್ಕರ್ಮಿಗಳ ಗುಂಪೊಂದು ಬೀದಿಬದಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಗರದ ರೇಡಿಯೋ ಸ್ಟೇಷನ್ ಸಮೀಪದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕೊಲೆಯಾದ ಯುವಕನನ್ನು ಆಂಧ್ರಪ್ರದೇಶದ ಕಡಪ ಮೂಲದ ಇಮಾಮ್ ಹುಸೇನ್ (24) ಎಂದು ಗುರುತಿಸಲಾಗಿದೆ.
ಕೊಲೆಯಾದ ಇಮಾಮ್ ಹುಸೇನ್ ಕಳೆದ 15 ದಿನಗಳಿಂದ ನಗರದ ಬೀದಿಬದಿಯಲ್ಲಿ ಡೈ ಫುಡ್ಸ್ ಮಾರಾಟ ಮಾಡಿ ಕೊಂಡಿದ್ದರು. ನಿನ್ನೆ ತಡರಾತ್ರಿ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಇಮಾಮ್ ಹುಸೇನ್ ಮೃತಪಟ್ಟಿದ್ದು, ಮತ್ತೊರ್ವನನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ.
ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.