ರಾಯಚೂರು | ನರೇಗಾ ಯೋಜನೆ ಬದಲಾವಣೆ ವಿರೋಧಿಸಿ ಡಿ.22ರಂದು ಸಂಸದರ ಕಚೇರಿ ಮುಂದೆ ಪ್ರತಿಭಟನೆ : ಗುರುರಾಜ
ರಾಯಚೂರು: ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಯೋಜನೆ ಎಂದು ಬದಲಾವಣೆ ಮಾಡುವುದರೊಂದಿಗೆ ಹೊಸ ಮಸೂದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಗ್ರಾಮೀಣ ಕೂಲಿಕಾರರ ಸಂಘದಿಂದ ಡಿ.22ರಂದು ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಮಿತಿಯ ಕಾರ್ಯದರ್ಶಿ ಗುರುರಾಜ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಷ್ಕರಿಸಿ ನೂರು ದಿನ ಬದಲು 125 ದಿನಗಳಿಗೆ ಹೆಚ್ಚಿಸಿರುವ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಿಸಿದೆ. ಈ ಮೊದಲು ಕೇಂದ್ರದಿಂದ 90 ಪ್ರತಿಶತ ಹಾಗೂ ರಾಜ್ಯಗಳಿಂದ 10 ಪ್ರತಿಶತ ಅನುದಾನದಲ್ಲಿ ಜಾರಿಗೊಳಿಸುತ್ತಿದ್ದ ಯೋಜನೆಯನ್ನು ಈಗ 60:40 ಅನುಪಾತದಲ್ಲಿ ಜಾರಿಗೆ ಮುಂದಾಗಿದೆ. ನೂರು ದಿನ ಕೆಲಸ ನಿಗಧಿಪಡಿಸಿದ್ದಾಗಲೇ 60 ದಿನ ಕೆಲಸ ನೀಡಲು ಆಗಿಲ್ಲ. ಅನುದಾನವೇ ಕಡಿತಗೊಳಿಸಿದ್ದರಿಂದ ಉದ್ಯೋಗ ಖಾತ್ರಿಯೇ ಅರ್ಥ ಕಳೆದುಕೊಳ್ಳುವಂತಾಗಲಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಕಾಯ್ದೆಯನ್ನು ತಿದ್ದುಪಡಿಯಿಂದ ಬೇಡಿಕೆ ಆಧಾರದ ಬದಲು ಪೂರೈಕೆ ಆಧಾರದ ಮೇಲೆ ಜಾರಿಗೊಳಿಸಿ ಕಾರ್ಮಿಕರ ಹಕ್ಕು ಕಸಿಯುವ ಪ್ರಯತ್ನಕ್ಕೆ ಮುಂದಾಗಿದೆ. ವಿಕೇಂದ್ರಿಕರಣ ವ್ಯವಸ್ಥೆಯನ್ನು ಗಾಳಿಗೆ ತೂರಿ ಗ್ರಾಮಸಭೆ ಅಧಿಕಾರವೂ ಕಿತ್ತಿಕೊಂಡಿದೆ. ಮಹಿಳೆಯರು, ಕೂಲಿ ಕಾರ್ಮಿಕರು ನಂಬಿಕೊಂಡಿದ್ದ ಉದ್ಯೋಗಖಾತ್ರಿ ಕಳೆದುಕೊಂಡಂತಾಗಿದೆ. ಕೂಡಲೇ ಮಸೂದೆ ರದ್ದಿಗೆ ಆಗ್ರಹಿಸಿ ರಾಜ್ಯಾದ್ಯಂತ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿರೋಧಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ , ಮಾರೆಮ್ಮ, ರೂಪಾ, ಹುಚ್ಚಮ್ಮ ಇದ್ದರು.