ರಾಯಚೂರು | ಸೆ.28 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ರಾಯಚೂರು: ವಿಶ್ವ ಹೃದಯ ದಿನದ ಅಂಗವಾಗಿ ಸೆ.28ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 3 ಗಂಟೆಯ ವರೆಗೆ ನಗರದ ವಿಜಯ ಪಾಲಿಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೃದಯ ರೋಗ ತಜ್ಞ ಡಾ.ಅಜಿತ್.ವಿ.ಕುಲಕರ್ಣಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ದತಿ, ಶಾರೀರಿಕ ವ್ಯಾಯಮ ಕಡಿಮೆಯಾಗಿರುವುದು ಸೇರಿದಂತೆ ಇತರೆ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ನಮ್ಮ ಕ್ಲಿನಿಕ್‍ನಲ್ಲಿಯೇ 40 ವರ್ಷ ವಯಸ್ಸಿನ ಕೆಳಗಿರುವವರು ಹೆಚ್ಚಾಗಿ ಹೃದಯ ಸಂಬಂಧಿ ತಪಾಸಣೆಗೆ ಆಗಮಿಸುತ್ತಿದ್ದಾರೆ.
ಆದ್ದರಿಂದ ಜನರು ನಿರ್ಲಕ್ಷ್ಯ ವಹಿಸದೇ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಸೆ.29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಅದರ ಅಂಗವಾಗಿ ಸೆ.28ರಂದು ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಉಚಿತ ತಪಾಸಣೆ, ಇಸಿಜಿ, ಶುಗರ್ ಟೆಸ್ಟ್, ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಇದರ ಜೊತೆಗೆ ಜನರಿಗೆ ಅನುಕೂಲವಾಗಲು ಸೆ.29ರಿಂದ ಇಕೋ ಮತ್ತು ಟಿಎಂಟಿ ಸೇವೆಗಳನ್ನು ಶೇ.50 ರಷ್ಟು ರಿಯಾಯತಿ ದರದಲ್ಲಿ ಒದಗಿಸಲಾಗುವುದು. ಜನರು ಸೆ.28ರ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಅಮರೇಶ ಸೇರಿದಂತೆ ಅನೇಕರಿದ್ದರು.