×
Ad

ರಾಯಚೂರು | ಪತಿಯನ್ನು ನದಿಗೆ ತಳ್ಳಿದ ಪ್ರಕರಣ : ಬಾಲ್ಯ ವಿವಾಹದ ಆರೋಪದಲ್ಲಿ ಪತಿ ತಾತೆಪ್ಪನ ಬಂಧನ

Update: 2025-08-03 21:18 IST

ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್‌ನಲ್ಲಿ ಪತ್ನಿಯೇ ಪತಿಯನ್ನು ನದಿಗೆ ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಬಾಲ್ಯ ವಿವಾಹದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪತಿ ತಾತೆಪ್ಪನನ್ನು ಪೊಲೀಸರು ಇಂದು(ಆ.3) ಬಂಧಿಸಿ, ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಪತಿಯನ್ನು ನದಿಗೆ ತಳ್ಳಿದ ಬಳಿಕ ರಾಜಿ ಸಂದಾನದ ಮೂಲಕ ಇಬ್ಬರು ವಿವಾಹ ವಿಚ್ಛೇದನ ಪಡೆಯಲು ಸಹಮತ ವ್ಯಕ್ತಪಡಿಸಿದ್ದರು. ಆದರೆ, ಬಳಿಕ ನಡೆದ ಬೆಳವಣಿಗೆಯಲ್ಲಿ ಪತಿ ತಾತೆಪ್ಪ ಅಪ್ರಾಪ್ತೆಯನ್ನು ವಿವಾಹವಾಗಿದ್ದಾನೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೇವಸುಗೂರು ಪಿಡಿಓ, ಪತಿ ತಾತೆಪ್ಪ, ಬಾಲಕಿಯ ತಾಯಿ, ಕಲ್ಯಾಣ ಮಂಟಪದ ಮಾಲಕರು, ಅರ್ಚಕ ಹಾಗೂ ಸಾಕ್ಷಿದಾರರು ಸೇರಿ ಹಲವರ ವಿರುದ್ಧ ದೂರು ದಾಖಲಾಗಿತ್ತು.

ಪ್ರಕರಣ‌ ತನಿಖಾ ಹಂತದಲ್ಲಿದ್ದರೂ, ಆರೋಪಿಗಳ ಬಂಧನವಾಗಿರಲಿಲ್ಲ. ಇತ್ತೀಚೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೂಸಂಬೆ ಅವರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಆರೋಪಿ ತಾತೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿ ತಾತೆಪ್ಪನನ್ನು ಆರೋಗ್ಯ ತಪಾಸಣೆಗೆ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಅಲ್ಲಿಂದ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ತನಿಖೆ ಆರಂಭಿಸಿದ್ದಾರೆ. ಆ.3ರಂದು ನ್ಯಾಯಾಧೀಶರ ಮುಂದೆ ಪ್ರಸ್ತುತಪಡಿಸಬಹುದು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News