×
Ad

ರಾಯಚೂರು | ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಕಲಾ ಜಾಥಾಕ್ಕೆ ಚಾಲನೆ

Update: 2025-11-20 21:14 IST

ರಾಯಚೂರು :  ರಾಜ್ಯಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದ ಮೂಲಕ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಹಮ್ಮಿಕೊಂಡಿರುವ ಕಲಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಮಟ್ಟದ ಸಮಿತಿಯ ಉಪಾಧ್ಯಕ್ಷರಾದ ನಾಗೇಂದ್ರ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ ಹಾಗೂ ತಾಲೂಕುಮಟ್ಟದ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್‌ ಕಲಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಹನುಮಂತಪ್ಪ ಜಾಲಿಬೆಂಚಿ, ಜನತೆಗೆ ಮಾತು ನೀಡಿದಂತೆ ರಾಜ್ಯ ಸರಕಾರ ವಾರ್ಷಿಕವಾಗಿ 52.000 ಕೋಟಿ ರೂ ಬಳಕೆ ಮಾಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬದ್ಧತೆಯನ್ನು ಉಳಿಸಿಕೊಂಡಿದೆ. ಈ ಯೋಜನೆಗಳಿಂದ ರಾಜ್ಯದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಈ ಬಗ್ಗೆ ಪ್ರಚಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದರು.

ನಾಗೇಂದ್ರ ಮಟಮಾರಿ ಮಾತನಾಡಿ, ರಾಜ್ಯದ 7 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ಬದುಕು ನೀಡಿದೆ. ರಾಜ್ಯದ ಶೇ.96ರಷ್ಟು ಜನ ಒಂದಲ್ಲಾ ಒಂದು ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಮಾಹಿತಿಯು ಜಿಲ್ಲೆಯ ಪ್ರತಿ ಮನೆಮನೆ ಬಾಗಿಲಿಗೆ ತಲುಪಬೇಕು ಎಂದು ತಿಳಿಸಿದರು.

ಪವನ್ ಕಿಶೋರ್ ಪಾಟೀಲ್‌ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ರಾಯಚೂರು ಜಿಲ್ಲೆಯಲ್ಲಿ ಸಹ ಅಚ್ಚುಕಟ್ಟಾಗಿ ಅನುಷ್ಠಾನವಾಗುತ್ತಿವೆ. ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಗೆ 5ನೇ ಸ್ಥಾನ ಲಭಿಸಿದೆ. ಯುವನಿಧಿ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ನಾವು 3ನೇ ಸ್ಥಾನದಲ್ಲಿದ್ದೇವೆ. ಕಲಾ ಜಾಥಾ ತಂಡದಲ್ಲಿರುವ ಎಲ್ಲರೂ ಪ್ರಚಾರ ರಾಯಭಾರಿಗಳು ನಾವು ಎಂದು ಭಾವಿಸಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ ಮಾತನಾಡಿ, ಅರ್ಹ ಪ್ರತಿಯೊಬ್ಬರು ಸಹ ಈ ಪಂಚ ಗ್ಯಾರಂಟಿ ಯೋಜನೆಗಳ ಪಾಲುದಾರರಾಗುವ ನಿಟ್ಟಿನಲ್ಲಿ ಪ್ರಚಾರ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News