ರಾಯಚೂರು | ರೌಡಕುಂದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ
Update: 2025-07-23 23:22 IST
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿಹಬ್ಬಿದ್ದು ಗ್ರಾಮಸ್ಥರಲ್ಲಿ ಆತಂಕದ ಮನೆ ಮಾಡಿದೆ.
ಕಳೆದ ಎರಡು-ಮೂರು ದಿನಗಳಿಂದ ತಾಲೂಕಿನಾದ್ಯಂತ ಚಿರತೆಯದ್ದೆ ಮಾತು. ರೌಡಕುಂದ ಗ್ರಾಮದ ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜೊತೆಗೆ ಕಳೆದ ಭಾನುವಾರದಂದು ಒಂದು ಹಸುವನ್ನು ತಿಂದು, ಕುರಿ ಮೇಕೆಗಳಿಗೆ ತೆರುಚಿದ ಗಾಯಗಳಾಗಿವೆ ಎಂದು ಹೇಳಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಚರಣೆ ನಡೆಸಿ, ಚಿರತೆಯ ಹೆಜ್ಜೆ ಗುರುತಿಸಿ ಎರಡು ಬೋನ್ ಗಳನ್ನು ಇಟ್ಟಿದ್ದಾರೆ. ಎರಡು ಬೋನ್ ಗಳನ್ನು ಇಟ್ಟರೂ ಸಹ, ಇನ್ನೂ ಚಿರತೆ ಬೋನಿಗೆ ಬಿದ್ದಲ್ಲ. ರೌಡಕುಂದ ಸುತ್ತವಿರುವ ಗುಡ್ಡದ ಪ್ರದೇಶದಲ್ಲಿ ಯಾರು ಕೂಡ ಹೋಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.