Raichur | ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ
ರಾಯಚೂರು: ಶಾಲೆಗಳಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿಸಿಯೂಟ ನೌಕರರು ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಡುಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಕ್ಲಸ್ಟರ್ ಕಿಚನ್ ವ್ಯವಸ್ಥೆಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಸ್ಥಳೀಯವಾಗಿ ತಯಾರಿಸಿದ ತಾಜಾ ಹಾಗೂ ಬಿಸಿಯಾದ ಆಹಾರ ನೀಡುವ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಂಟಿ ನಿರ್ದೇಶಕರು ನ.7ರಂದು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಕ್ಲಸ್ಟರ್ ಕಿಚನ್ ರಚನೆಯ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ನೀಡುವಂತೆ ಸೂಚಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ಯೋಜನೆಯು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜತೆಗೆ ಶಾಲಾ ಹಾಜರಾತಿ ಹೆಚ್ಚಿಸುವುದು, ಮಧ್ಯಾಹ್ನದ ನಂತರ ಮಕ್ಕಳ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುವುದು ಹಾಗೂ ಲಿಂಗ ಮತ್ತು ಜಾತಿ ತಾರತಮ್ಯ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಆದ್ದರಿಂದ ಮಕ್ಕಳಿರುವ ಶಾಲೆಗಳಲ್ಲಿಯೇ ಆಹಾರ ತಯಾರಿಸಿ ಬಿಸಿಬಿಸಿಯಾಗಿ ವಿತರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಅಡುಗೆ ಕೋಣೆ, ಪಾತ್ರೆಗಳು, ಗ್ಯಾಸ್ ಸೇರಿದಂತೆ ಮೂಲಸೌಕರ್ಯಗಳಿಗಾಗಿ ಸರ್ಕಾರ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಇಂತಹ ವ್ಯವಸ್ಥೆಯನ್ನು ಬದಲಿಸಿ ಕೇಂದ್ರೀಕೃತ ಅಡುಗೆ ವ್ಯವಸ್ಥೆ ಜಾರಿಗೆ ತರುವುದು ಸೂಕ್ತವಲ್ಲ. ಬಿಸಿಯೂಟದ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುವುದೂ ಸರಿಯಲ್ಲ. ಶಿಕ್ಷಕರು ಪಠ್ಯ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ಅಡುಗೆ ಮತ್ತು ಬಿಸಿಯೂಟ ನಿರ್ವಹಣೆಯ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಅಡುಗೆ ಸಿಬ್ಬಂದಿಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದವರೂ ಇದ್ದಾರೆ. ಹಲವು ವರ್ಷಗಳಿಂದ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಯೋಜನೆ ನಿರ್ವಹಣೆಯ ಅನುಭವವಿದೆ. ಅಗತ್ಯವಿದ್ದರೆ ಅವರ ಕೆಲಸದ ಅವಧಿಯನ್ನು ವಿಸ್ತರಿಸಿ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಬೆಲೆ ಏರಿಕೆಯಿಂದ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ. ಅಂಗನವಾಡಿಗಳಿಗೆ ಮೊಟ್ಟೆ ಪೂರೈಸುವ ಮಾದರಿಯಲ್ಲಿಯೇ ಕುಕ್ಕುಟ ಮಹಾಮಂಡಳಿಯಿಂದ ಶಾಲೆಗಳಿಗೂ ಮೊಟ್ಟೆ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮರಿಯಮ್ಮ, ರೇಣುಕಮ್ಮ, ಮುಹಮ್ಮದ್ ಹನೀಫ್, ಡಿ.ಎಸ್. ಶರಣಬಸವ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಾಗಮ್ಮ, ಗಿರಿಯಪ್ಪ ಪೂಜಾರಿ, ಶೋಭಾ, ಸಿದ್ದಮ್ಮ, ಝರೀನಾ ಬೇಗಂ, ಶಹನಾಜ್ ಬೇಗಂ, ವಿಶಾಲಾಕ್ಷಮ್ಮ, ಶರಣಮ್ಮ ಪಾಟೀಲ, ವಾಣಿಖಾದ್ರಿ, ಶರಫಿದ್ದೀನ್ ಪೋತ್ನಾಳ, ತೆರೇಸಾ, ಗಂಗೂರೇಖಾ, ಹುಸೇನ್ ಅತ್ತನೂರು, ಗಂಗಮ್ಮ, ರೇಣುಕಾ ಮಲ್ಲಟ, ಬಸಮ್ಮ ಕೋಟೇಕಲ್, ಪದ್ಮ ಸೇರಿದಂತೆ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.