Raichur | ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು: ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕರಿಗೆ ಕಂಟಕವಾಗಿರುವ ಲೇಬರ್ ಕೋಡ್‌ಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು. ಕಾರ್ಮಿಕರಿಗೆ ಅನುಕೂಲವಾಗುವಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಆಧಾರಿತ ಯೋಜನೆಗಳನ್ನು ಜಾರಿಗೊಳಿಸಿ, ಪ್ರೊಕ್ಯೂರ್‌ಮೆಂಟ್ ಯೋಜನೆಗಳನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನದಲ್ಲಿ ಮಾಡಿರುವ ಕಡಿತವನ್ನು ಹಿಂಪಡೆಯಬೇಕು. ಬಾಕಿ ಉಳಿದಿರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಪಾವತಿಸಿ, ಸಹಾಯಧನದ ಮೊತ್ತವನ್ನು ಹೆಚ್ಚಿಸಬೇಕು. ಕಾರ್ಮಿಕರಿಗೆ ಉಪಯೋಗವಾಗದ ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ವೈದ್ಯಕೀಯ ತಪಾಸಣೆ ಯೋಜನೆಯಲ್ಲಿ 800 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಬೇಕು. ಕಾರ್ಮಿಕರ ಮಾಸಿಕ ಪಿಂಚಣಿಯನ್ನು 5,000 ರೂ. ಗೆ ಹಾಗೂ ಕುಟುಂಬ ಪಿಂಚಣಿಯನ್ನು 3,000 ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಮಂಡಳಿಗೆ ಹೊರೆಯಾಗುವ ಅಪ್ರಾಯೋಗಿಕ ವಸತಿ ಶಾಲೆ ಯೋಜನೆಯನ್ನು ಕೈಬಿಡಬೇಕು. ಜಿಟಿಟಿಸಿ ಕೌಶಲ್ಯ ಕೇಂದ್ರಗಳನ್ನು ಮಂಡಳಿಯ ನಿಧಿಯಿಂದ ತೆರೆಯುವುದನ್ನು ನಿಲ್ಲಿಸಬೇಕು. ಖಾಸಗಿ ಏಜೆನ್ಸಿಗಳ ಮೂಲಕ ನಡೆಸುತ್ತಿರುವ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು. ಬಾಕಿ ಉಳಿದಿರುವ ಮನೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳ ಅರ್ಜಿಗಳಿಗೆ ಕೂಡಲೇ ಧನಸಹಾಯ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಡಬ್ಲ್ಯುಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ನಾಯಕ, ಕಾರ್ಯದರ್ಶಿ ಶಬ್ಬೀರ್, ಪದಾಧಿಕಾರಿಗಳಾದ ನಿಂಗಪ್ಪ, ಹನುಮಂತಬಿ ದರಾಣಿ, ಆಂಜನೇಯ ಕೋಟೆ, ಕುಬೇಂದ್ರ, ರಾಜು, ಸಿಐಟಿಯು ಕಾರ್ಯದರ್ಶಿ ಡಿ.ಎಸ್. ಶರಣಬಸವ, ರಾಮಣ್ಣ ಮಾಡಬಾಳ, ಬಾಲುಗೋಸಲ್, ಮಸ್ತಾನ ಸೇರಿದಂತೆ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.