ರಾಯಚೂರು: ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಮೂಲಕ ಮಹಿಳೆಯರನ್ನು ಸಾಮಾಜಿಕವಾಗಿ ಹಿಂದೆ ತಳ್ಳಲಾಗುತ್ತಿದೆ. ವಿಶೇಷವಾಗಿ ಒಂಟಿ ಮಹಿಳೆಯರು ನಿತ್ಯವೂ ಅಪಮಾನ, ನಿಂದನೆ ಹಾಗೂ ವಿವಿಧ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ರಾಜ್ಯ ಸಂಚಾಲಕಿ ಬಿ. ಮಾಳಮ್ಮ ಕಳವಳ ವ್ಯಕ್ತಪಡಿಸಿದರು.

ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಪ್ರಥಮ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಹಿಳೆಯರನ್ನು ಪುರುಷ ಪ್ರಧಾನ ವ್ಯವಸ್ಥೆಯಡಿ ಶೋಷಣೆಗೆ ಒಳಪಡಿಸಲಾಗುತ್ತಿದೆ. ಶಿಕ್ಷಣ, ಆಸ್ತಿ ಹಾಗೂ ಮರುಮದುವೆಯ ಹಕ್ಕುಗಳಿಂದ ವಂಚಿಸಲಾಗುತ್ತಿದೆ. ಲಿಂಗ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ತೊಡೆದುಹಾಕಿ, ಒಂಟಿ ಮಹಿಳೆಯರು ಸ್ವಾವಲಂಬಿ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳಲು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಹೋರಾಟಗಾರ್ತಿ ಎಚ್. ಪದ್ಮಾ ಮಾತನಾಡಿ, ವಿಧವೆಯರ ಕೈಬಳೆ, ಕಾಲುಂಗುರ, ಕರಿಮಣಿ ಹಾಗೂ ಕುಂಕುಮವನ್ನು ತೆಗೆದುಹಾಕುವುದು, ತಲೆಕೂದಲು ತೆಗೆಸಿ ಬಿಳಿ ಸೀರೆ ಧರಿಸುವಂತೆ ಒತ್ತಾಯಿಸುವುದು ಮತ್ತು ಶುಭಕಾರ್ಯಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸುವಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕು ಎಂದು ಹೇಳಿದರು.

ಹೋರಾಟಗಾರರಾದ ಕೆ.ಜಿ. ವೀರೇಶ ಹಾಗೂ ಜನಾರ್ದನ ಮಾತನಾಡಿದರು. ಪದ್ಮಾವತಿ, ಅರಳಿಬೆಚ್ಚಿ, ಉರುಕುಂದಮ್ಮ, ಜಿಲಾನಿ ಪಾಷ, ಶರಣಮ್ಮ, ನರಸಮ್ಮ ಸೇರಿದಂತೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು/ವಾರ್ತಾಭಾರತಿ

ರಾಯಚೂರು ಜಿಲ್ಲಾ ವರದಿಗಾರರು

ಬವಸಾಲಿ ಅವರು 2013ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಬಿ.ಎ ಪದವಿ ಹಾಗೂ 2017ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು, ವೆಬ್‌ಸೈಟ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ