Raichur | ಡಾ.ಅಜಯಸಿಂಗ್ ವಿರುದ್ಧದ ಘೇರಾವ್ ಹೋರಾಟಕ್ಕೆ ಪೊಲೀಸರಿಂದ ತಡೆ : ಎಸ್.ಮಾರೆಪ್ಪ ಆರೋಪ

Update: 2026-08-16 19:39 IST

 ರಾಯಚೂರು: ಜಿಲ್ಲೆಯ ಉಸ್ತುವಾರಿ ಸಚಿವ ಅಜಯ್ ಸಿಂಗ್ ವಿರುದ್ಧ ಆಗಸ್ಟ್ 15ರಂದು ನಡೆಸಲು ಉದ್ದೇಶಿಸಿದ್ದ ಘೇರಾವ್ ಹೋರಾಟವನ್ನು ಪೊಲೀಸರು ಹತ್ತಿಕ್ಕಿದ್ದಾರೆ. ಯಾರ ಒತ್ತಡಕ್ಕೆ ಮಣಿದು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಬೇಕು ಎಂದು ಹಿರಿಯ ಹೋರಾಟಗಾರ ಹಾಗೂ ವಕೀಲ ಎಸ್. ಮಾರೆಪ್ಪ ಆರೋಪಿಸಿದರು.

ರವಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಘೇರಾವ್ ನಡೆಸಲು ಕನಿಷ್ಠ 10 ನಿಮಿಷವೂ ಅವಕಾಶ ನೀಡದೆ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಉಸ್ತುವಾರಿ ಸಚಿವರಿಗೆ ಹೋರಾಟಗಾರರ ಧ್ವನಿ ಕೇಳಬಾರದು ಎಂಬ ಉದ್ದೇಶದಿಂದಲೇ ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಟ ನಡೆಸದ ಪರಿಣಾಮ ರಾಯಚೂರು ಜಿಲ್ಲೆ ಬೇರೆ ಜಿಲ್ಲೆಯ ಸಚಿವರ ಕೈಯಲ್ಲಿದೆ. ಬೇರೆ ಜಿಲ್ಲೆಯವರನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಬದಲು ಜಿಲ್ಲೆಯವರೇ ಸಚಿವರಾಗಬೇಕು ಹಾಗೂ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕು ಎಂಬುದು ಹೋರಾಟಗಾರರ ಒಕ್ಕೊರಲಿನ ಬೇಡಿಕೆಯಾಗಿದೆ ಎಂದರು.

ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸೆಪ್ಟೆಂಬರ್ 17ರಂದು ನಡೆಯಲಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಬೇರೆ ಜಿಲ್ಲೆಯ ಸಚಿವರಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರರಾದ ರವೀಂದ್ರನಾಥ ಪಟ್ಟಿ, ಎಂ.ಆರ್. ಬೇರಿ, ಶ್ರೀನಿವಾಸ ಕಲವಲದೊಡ್ಡಿ, ಅಶೋಕ್ ಕುಮಾರ್ ಜೈನ್, ಬಸವರಾಜ್, ಜೈಭೀಮ್ ವಲ್ಲಭ, ಹೇಮರಾಜು ಅಸ್ಕಿಹಾಳ ಹಾಗೂ ನರಸಿಂಹಲು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News