ಆ.18ರಂದು ರಾಯಚೂರಿನಲ್ಲಿ ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನ

Update: 2026-08-16 19:12 IST

ರಾಯಚೂರು: ಸ್ವಾತಂತ್ರ್ಯಪೂರ್ವ ಹೈದರಾಬಾದ್ ಕರ್ನಾಟಕದ ಗ್ರಾಮೀಣ ಬದುಕು, ಸಾಮಾಜಿಕ ವ್ಯವಸ್ಥೆ ಹಾಗೂ ರಾಜಕೀಯ–ಆರ್ಥಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸುವ ನಾಡೋಜ ಡಾ. ಶಾಂತರಸರ ‘ಸಣ್ಣಗೌಡಸಾನಿ’ ಕಾದಂಬರಿ ಆಧಾರಿತ ನಾಟಕವು ಆ.18ರಂದು ಸಂಜೆ 6.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮುಖಾಮುಖಿ ರಂಗ ಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು, ರಂಗಾಯಣ ಕಲಬುರಗಿ ಹಾಗೂ ಮುಖಾಮುಖಿ ರಂಗ ಸಂಸ್ಥೆಯ ಸಹಯೋಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಕಾದಂಬರಿಗೆ ಮಹಾಂತೇಶ ನವಲಕಲ್ ರಂಗರೂಪ ನೀಡಿದ್ದು, ಪ್ರವೀಣ್ ರೆಡ್ಡಿ ಗುಂಜಹಳ್ಳಿ ರಂಗಪಠ್ಯ ಹಾಗೂ ವಿನ್ಯಾಸ ಸಿದ್ಧಪಡಿಸಿ ನಿರ್ದೇಶನ ಮಾಡಿದ್ದಾರೆ. ರಾಘವ ಕಮ್ಮಾರ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ, ಗಜಲ್, ಕಥೆ, ಕಾದಂಬರಿ, ನಾಟಕ, ಸಂಶೋಧನೆ ಹಾಗೂ ಅನುವಾದ ಕ್ಷೇತ್ರಗಳಿಗೆ ಶಾಂತರಸರು ನೀಡಿರುವ ಮಹತ್ವದ ಕೊಡುಗೆಯನ್ನು ರಂಗಭೂಮಿಯ ಮೂಲಕ ಪರಿಚಯಿಸುವ ಉದ್ದೇಶದಿಂದ ನಾಟಕ ರೂಪಿಸಲಾಗಿದೆ. ‘ಸಣ್ಣಗೌಡಸಾನಿ’ ಕಾದಂಬರಿಯಲ್ಲಿ ಹೈದರಾಬಾದ್ ಕರ್ನಾಟಕದ ಗ್ರಾಮೀಣ ಜೀವನ, ಮಾನವ ಸಂಬಂಧಗಳ ಸಂಕೀರ್ಣತೆ, ಸಾಮಾಜಿಕ ದೌರ್ಬಲ್ಯಗಳು, ರಾಜಕೀಯ ಪರಿಣಾಮಗಳು ಹಾಗೂ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ ಎಂದರು.

ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಚಿಂತಕ ಬಸವರಾಜ ಕಳಸ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಗಾಯಣ ಕಲಬುರಗಿಯ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಯಚೂರಿನ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಬೇಕು ಎಂದು ವೇಣುಗೋಪಾಲ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನರಸಿಂಹ, ಚಂದ್ರಶೇಖರ್ ಹಾಗೂ ರಂಗಸ್ವಾಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News