×
Ad

ರಾಯಚೂರು| ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ "ಸೌಹಾರ್ದ ಭಾರತ' ಕೃತಿ ಲೋಕಾರ್ಪಣೆ

Update: 2026-01-11 17:44 IST

ರಾಯಚೂರು: ಮಹಿಳೆಯರು ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲರೂ ಕೂಡಿ ಸೌಹಾರ್ದ ಭಾರತವನ್ನು ಕಟ್ಟಬೇಕಾಗಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ವೀರ ಹನುಮಾನವರು ಹೇಳಿದರು.

ಶನಿವಾರದಂದು ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇವರ ಸಹಯೋಗದಲ್ಲಿ ರಾಯಚೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ನಾಡಿನ ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ "ಸೌಹಾರ್ದ ಭಾರತ, ಸಮಾನತೆಯ ಸ್ನೇಹಿತ" ಪುಸ್ತಕ ಜನಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿನ ಸಾಮಾಜಿಕ ನ್ಯಾಯದ ಅನೇಕ ಮುಖಗಳನ್ನು ಕಾಣಬಹುದು.10 ಲೇಖನಗಳಲ್ಲಿ ಭಾರತ ಪಾರಂಪರಿಕ ಸೌಹಾರ್ದತೆ ಜೊತೆಗೆ ದೇಶದ ಬಿಕ್ಕಟ್ಟುಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಡಾ. ಸಿ. ಬಿ. ಚಿಲ್ಕರಾಗಿ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರು ಪುಸ್ತಕ ಲೋಕಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮಾರುಕಟ್ಟೆ ಮಾತುಗಳಿಗಿಂತ ಮೌಲ್ಯ ಮಾತುಗಳು ಉತ್ತಮ ಎಂದು ಹೇಳಿದರು.

ಕೃತಿ ಪರಿಚಯವನ್ನು ಮಾಡಿ ಹಿರಿಯ ಸಾಹಿತಿಗಳು, ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಅವರು ಮಾತನಾಡುತ್ತಾ, ಈ ರಾಷ್ಟ್ರವನ್ನು ಒಂದೇ ಧರ್ಮಕ್ಕೆ ಸೀಮೀತಗೊಳಿಸಬಾರದು ಎನ್ನುವುದು ಈ ಪುಸ್ತಕದಲ್ಲಿರುವ ತಿರುಳಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅತುಬಿಹಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಖಾದರ್ ಬಾಷಾ ಮಾತನಾಡಿ, ಬರಗೂರವರು ಭಾರತ ಚಿಂತನೆಯನ್ನು ಬೆವರಿನ ಸಂಸ್ಕೃತಿ ಮೂಲಕ ಕಟ್ಟಿದರು ಎಂದು ಹೇಳಿದರು.

ಕ್ರಿ ಶ 960 ರಿಂದ ನಾವು ಪಂಪನ ಸಾಹಿತ್ಯ ಓದುತ್ತೇವೆ, ಆದರೇ ವಿಚಾರವಂತರ ನಾಡಿನಲ್ಲಿ ವಿಚಾರವಂತರ ಕೊಲೆಗಾಳಾಗುವುದೇಕೆ? ವರ್ತಮಾನದಲ್ಲಿ ಈ ಪುಸ್ತಕದ ಆಶಯಗಳು ಪ್ರಸ್ತುತ. ಹಿಂದೆ ಇರುವ ಸೌಹಾರ್ದತೆ ಇಂದು ಯಾಕೆ ಇಲ್ಲ, ಮೊದಲು ನಾವು ಮಾನವರು ಪರಿವರ್ತನೆ ಆಗಬೇಕು.  ನಮ್ಮ ತಪ್ಪನ್ನು ನಾವು ತಿದ್ದಿಕೊಂಡು ನಡೆಯಬೇಕು ಎಂದರು. ಜಾತಿ ಧರ್ಮ ಮನೆಯ ಒಳಗೆ ಇರಲಿ ಹೊರಗೆ ನಾವೆಲ್ಲರೂ ಒಂದೇ ಅನ್ನುವ ಭಾವ ಬರಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್,  ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಇನ್ನೂ ನಮಗೆ ಸೌಹಾರ್ದ ಭಾರತ ಬೆಳೆಸಲು ಆಗುತ್ತಿಲ್ಲ. ಸೌಹಾರ್ದತೆ ಮತ್ತು  ಸಮಾನತೆಯ ಅಗತ್ಯ ಇನ್ನೂ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ದೇಶದ ಸಮಗ್ರ ಜನತೆಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ವೇದಿಕೆಯಲ್ಲಿ ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಸವ ಪ್ರಭು ಪಾಟೀಲ್ ಬೆಟ್ಟದೂರು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಎಚ್. ಮ್ಯಾದಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ವಿಜಯ ರಾಜೇಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇದರ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ರಾಯಚೂರಿನ ನಾಗರಿಕರು ಭಾಗವಹಿಸಿದ್ದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ ಸ್ವಾಗತಿಸಿದರು. ರಾಮಣ್ಣ ಮ್ಯಾದಾರ್ ವಂದಿಸಿದರು. ಡಾ.ರೇಖಾ ಪಾಟೀಲ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News