Raichur | ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ : ಸಮದ್ ಪಾಷಾ
ರಾಯಚೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನದ ಅಂಗವಾಗಿ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖಂಡ ಸಮದ್ ಪಾಷಾ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ನಡೆಯಲಿದೆ. ಪ್ರವಾದಿ ಮುಹಮ್ಮದ್(ಸ) ಅವರ ಕುರಿತು ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ವಿವಿಧ ಸಮುದಾಯಗಳ ನಡುವಿನ ಪರಸ್ಪರ ಬಾಂಧವ್ಯ ಮತ್ತು ಸೌಹಾರ್ದವನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಸಾಹಿತಿ ಯೋಗೇಶ್ ಮಾಸ್ಟರ್ ರಚಿಸಿರುವ ‘ಮಾನವ ಮನಸ್ಸಿನ ಕೃಷಿಕ–ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ರಚಿಸಿರುವ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಕೃತಿಗಳನ್ನು ರಾಜ್ಯಾದ್ಯಂತ ಪರಿಚಯಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧೆಡೆ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಸಮದ್ ಪಾಷಾ ಹೇಳಿದರು.
ಜಮಾಅತೆ ಇಸ್ಲಾಂ ಹಿಂದ್‍ನ ಸ್ಥಾನಿಯ ಅಧ್ಯಕ್ಷ ಅಸೀಮುದ್ದೀನ್ ಅಕ್ತರ್, ಪದಾಧಿಕಾರಿಗಳಾದ ಮುಹಮ್ಮದ್ ಎಜಾಜ್, ಅಬ್ದುಲ್ ಮತೀನ್, ಅಬ್ದುಲ್‍ರಹಿಂ, ಶೇಖ ಅಹ್ಮದ್ ಸೌದಾಗರ, ಎಂ.ಐ. ಮಣಿಯಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.