ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.27 ರಂದು ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ : ಮೈತ್ರಿ ಕೃಷ್ಣನ್
ರಾಯಚೂರು : ಕಾರ್ಮಿಕರಿಗೆ 42 ಸಾವಿರ ಕನಿಷ್ಟ ವೇತನ ನೀಡಬೇಕು, ಗುತ್ತಿಗೆ ಪದ್ದತಿ ರದ್ದು ಮಾಡಿ ಖಾಯಂಗೊಳಿಸಬೇಕು ಹಾಗೂ ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ನಿಂದ ನ.27 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ತಿಳಿಸಿದ್ದಾರೆ.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ದಿನದಿಂದ ದಿನಕ್ಕೆ ಕಾರ್ಮಿಕ ವರ್ಗದ ಮೇಲೆ ಅನ್ಯಾಯ ಹೆಚ್ಚಾಗುತ್ತಿದೆ. ಕಾರ್ಮಿಕರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಕಾರ್ಮಿಕ ಕಾನೂನುಗಳ ಬದಲಾವಣೆಗೆ ಕೇಂದ್ರ ಸರಕಾರ ವಿಭಿನ್ನ ದಾರಿಯಲ್ಲಿ ಹೊರಟಿದೆ. ಕೇಂದ್ರ ಸರಕಾರದ ಬದಲು, ರಾಜ್ಯ ಸರಕಾರಗಳು ಈ ಕಾನೂನು ಬದಲಾವಣೆಯಲ್ಲಿ ತೊಡಗಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಲವಾರು ಕಾನೂನುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಉಳಿದ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ. ಹಾಲಿ ಕಾರ್ಮಿಕ ಕಾನೂನುಗಳನ್ನು ನೇರವಾಗಿ ಉಲ್ಲಂಘಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿಗೆ ಭಾರಿ ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ಶೇ.90ರಷ್ಟು ಕಾರ್ಮಿಕರು ಕನಿಷ್ಠ ವೇತನ ಹಾಗೂ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಅವರು ದೂರಿದರು.
ಕಾರ್ಮಿಕರು ಸಂಘ ಕಟ್ಟುವ, ದುಡಿಮೆಯ ಹಕ್ಕುಗಳ ರಕ್ಷಣೆಗಾಗಿ ಮುಷ್ಕರ ನಡೆಸುವ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. “ಹೆಚ್ಚು ಕೂಲಿ ಕೇಳಿದರೆ ಕೆಲಸಕ್ಕೆ ಬರಬೇಡಿ ಎಂಬ ಬೆದರಿಕೆ ದೇಶಾದ್ಯಂತ ಕೇಳಿಬರುತ್ತಿದೆ. ಸರಕಾರಿ, ಅರೆ ಸರಕಾರಿ ಹಾಗೂ ಖಾಸಗೀ ಕ್ಷೇತ್ರದಲ್ಲೂ ಕಾರ್ಮಿಕರ ಹಕ್ಕುಗಳ ಹಗರಣ ಎಗ್ಗಿಲ್ಲದೇ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರೇಡ್ ಯೂನಿಯನ್ ಕಾಯ್ದೆ-1926, ಗುತ್ತಿಗೆ ಕಾರ್ಮಿಕ (ರದ್ದತಿ & ನಿಯಂತ್ರಣ) ಕಾಯ್ದೆ-1970, ಕಾರ್ಖಾನೆಗಳ ಕಾಯ್ದೆ- 1948, ಕೈಗಾರಿಕಾ ವಿವಾದ ಕಾಯ್ದೆ-1947, ಕನಿಷ್ಠ ವೇತನ ಕಾಯ್ದೆ-1948 ಮುಂತಾದವುಗಳಲ್ಲಿರುವ ಕಾರ್ಮಿಕರ ಪರವಾದ ಅಂಶಗಳನ್ನು ತೆಗೆದು ಹಾಕುವ ನಿರ್ಧಾರ ಮೋದಿ ಸರಕಾರದ್ದಾಗಿದೆ. ಮೋದಿ ಸರಕಾರದ ಈ ಕಾರ್ಮಿಕ ವಿರೋಧಿ ಕ್ರಮಕ್ಕೆ ಕಾಂಗ್ರೆಸ್ ಮುಂತಾದ ಪಕ್ಷಗಳು ಬೆಂಬಲ ಸೂಚಿಸಿವೆ. ಕಾರ್ಮಿಕ ವರ್ಗ ಹೋರಾಡಿ ಪಡೆದಿದ್ದ ಕಾರ್ಮಿಕ ಹಿತ ರಕ್ಷಣಾ ಕಾಯ್ದೆಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಗುತ್ತಿಗೆ ಪದ್ದತಿ ರದ್ದುಗೊಳಿಸುವ ಬದಲು ದೇಶದೆಲ್ಲೆಡೆ ಗುತ್ತಿಗೆ ಪದ್ಧತಿ ತಲೆ ಎತ್ತಿ ನಿಂತಿದೆ. ಸರಕಾರಿ, ಅರೆ ಸರಕಾರಿ ಹಾಗೂ ಖಾಸಗೀ ವಲಯಗಳಲ್ಲಿ ರಾಜಾರೋಷವಾಗಿ ಜಾರಿಯಲ್ಲಿಡಲಾಗಿದೆ. ಬಂದರು, ರೈಲ್ವೆ, ವಿಮಾನಯಾನ, ಸಾರಿಗೆ, ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು, ನೀರಾವರಿ ಹಾಗೂ ಕುಡಿಯುವ ನೀರು ಸರಬರಾಜು ಪೌರಸೇವಾ ಮುಂತಾದ ಕ್ಷೇತ್ರಗಳು ಖಾಸಗಿಕರಣಕ್ಕೆ ಒಳಗಾಗುತ್ತಿವೆ ಎಂದರು.
ಇಂದಿನ ದಿನಗಳಲ್ಲಿ ಬೆಲೆ ಏರಿಕೆ, ಬದುಕಿನ ವೆಚ್ಚ ಗಗನಕ್ಕೇರಿದೆ. ಬಾಡಿಗೆ, ಆಹಾರ ಮತ್ತು ದಿನನಿತ್ಯದ ಖರ್ಚಿನ ಭಾರ ಹೆಚ್ಚಿದೆ. ಕಾರ್ಮಿಕರಿಗೆ 42,000 ರೂ. ಕ್ಕಿಂತ ಕಡಿಮೆ ವೇತನದಲ್ಲಿ ಬದುಕುವುದು ಅಸಾಧ್ಯವಾಗಿದೆ. ಕಾರ್ಮಿಕರು ಮಾನವೀಯ ಗೌರವದೊಂದಿಗೆ ಬದುಕಲು ಸಾಧ್ಯವಾಗುವಂತೆ ಕನಿಷ್ಠ ವೇತನವನ್ನು ತಕ್ಷಣವೇ ಪರಿಷ್ಕರಿಸಿ ಹೆಚ್ಚಿಸಬೇಕು. ಕಾರ್ಮಿಕರ ಹಕ್ಕೊತ್ತಾಯಗಳು ಈಡೇರಿಸುವಂತೆ ಆಗ್ರಹಿಸಿ ನ.27 ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಝೀಝ್ ಜಾಗೀರ್ದಾರ್, ಜಿಲ್ಲಾ ಮುಖಂಡರಾದ ಜಿಲಾನಿ ಪಾಷಾ, ಕಾರ್ಮಿಕ ಮುಖಂಡರಾದ ವೆಂಕಟೇಶ್, ಚಾಂದ್ ಪಾಷಾ ಉಪಸ್ಥಿತರಿದ್ದರು.