×
Ad

ರಾಯಚೂರು | ಆರೆಸ್ಸೆಸ್‌ ಪಥ ಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡ ಪಿಡಿಒರಿಂದ ಆಡಳಿತಾತ್ಮಕ ಕರ್ತವ್ಯ ಲೋಪ ಆರೋಪ : ಅಧಿಕಾರಿಗಳಿಂದ ತನಿಖೆ

Update: 2025-10-21 20:36 IST

ರಾಯಚೂರು: ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್‌ ಅವರ ಆಪ್ತ ಸಹಾಯಕ ಹಾಗೂ ಆರೆಸ್ಸೆಸ್‌ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಅಮಾನತುಗೊಂಡಿರುವ ಪಿಡಿಓ ಪ್ರವೀಣ್‌ ಕುಮಾರ್‌ ವಿರುದ್ಧ ಆಡಳಿತಾತ್ಮಕ ಕರ್ತವ್ಯ ಲೋಪದ ಪರಿಶೀಲನೆಯಲ್ಲಿ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ತೊಡಗಿದ್ದಾರೆ ಎಂದು ಹೇಳಲಾಗಿದೆ.

ಸಿರವಾರ ತಾಲೂಕಿನ ಗಣದಿನ್ನಿ ಮತ್ತು ಹೀರೆಹಣಗಿ ಗ್ರಾಮ ಪಂಚಾಯತ್‌ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್‌ ಕುಮಾರ್‌ 2023ರ ಡಿ.26ರಂದು ಶಾಸಕ ವಜ್ಜಲ್‌ ಅವರ ಆಪ್ತ ಸಹಾಯಕನಾಗಿ ನಿಯೋಜಿಸಲ್ಪಟ್ಟ ನಂತರ ಗಣದಿನ್ನಿ ಪಿಡಿಒ ಹುದ್ದೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಕರ್ತವ್ಯದಿಂದ ಬಿಡುಗಡೆಯಾದ ಬಳಿಕವೂ ಪಂಚಾಯತ್‌ ಬ್ಯಾಂಕ್‌ ಖಾತೆಗಳಲ್ಲಿ ವಹಿವಾಟು ನಡೆಸಿ, ಅನೇಕ ಯೋಜನೆಗಳ ಅನುದಾನವನ್ನು ಬಳಸಿರುವುದು ಪತ್ತೆಯಾಗಿವೆ.

ಸುಮಾರು 5ಲಕ್ಷಕ್ಕೂ ಅಧಿಕ ಅನುದಾನವನ್ನು ಪಾವತಿಸಿರುವುದು ಬ್ಯಾಂಕ್ ವಹಿವಾಟಿನಿಂದ ಗೊತ್ತಾಗಿದೆ. ಹೀರೆಹಣಗಿ ಪಂಚಾಯತಿಯಲ್ಲೂ ಹಣ ಪಾವತಿಸಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಆರೆಸ್ಸೆಸ್‌ ಪಥ ಸಂಚಲನದಲ್ಲಿ ಭಾಗಿಯಾಗಿರವ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಅಮಾನತು ಗೊಳಿಸುವಂತೆ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ಮೇರೆಗೆ ಜಿಲ್ಲಾ ಪಂಚಾಯತ್‌ ಸಿಇಒ ಈಶ್ವರ ಕುಮಾರ ಕಾಂದೂ ಆದೇಶಿಸಿದ್ದರು. ಪಿಡಿಒ ಪ್ರವೀಣಕುಮಾರ ಬೆಂಬಲಿಸಿ ಶಾಸಕ ಮಾನಪ್ಪ ವಜ್ಜಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಮಾನತು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು.

ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ಬೆಂಬಲಿಸಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದರು. ಆದರೆ, ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಪ್ರವೀಣಕುಮಾರ ನಡೆಸಿರುವ ಆಡಳಿತಾತ್ಮಕ ಲೋಪಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿರುವುದು ಈಗ ತೀವ್ರ ಚರ್ಚೆಗೆ ಈಡಾಗಿದೆ.

ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರೂ ಸಿರವಾರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಲೆಕ್ಕ ವಿಭಾಗದ ಅಧಿಕಾರಿಗಳು ಏಕೆ ಗಮನಹರಿಸಿಲ್ಲ ಎಂಬುದು ಪ್ರಶ್ನೆಯಾಗಿದೆ. ಎರಡು ಮೂರು ವರ್ಷಗಳಿಂದ ನಡೆದಿರುವ ಕರ್ತವ್ಯ ಲೋಪದ ಕುರಿತು ಈಗ ವಿಚಾರಣೆ ನಡೆಸಿರುವ ಅಧಿಕಾರಿಗಳ ಮೇಲೆ ಒತ್ತಡವಿತ್ತಾ ಎಂಬ ಪ್ರಶ್ನೆ ಕಾಡತೊಡಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News