ರಾಯಚೂರು| ಡಿ.28ಕ್ಕೆ ಯರಗೇರಾ ಬಡೇಸಾಬ್ ಉರೂಸ್
ರಾಯಚೂರು : ಯರಗೇರಾ ಗ್ರಾಮದ ಹಜರತ್ ಬಡೇಸಾಹೇಬ್ ಅವರ 127ನೇ ವರ್ಷದ ಉರೂಸ್ ಎ ಷರೀಪ್ ಕಾರ್ಯಕ್ರಮ ಡಿ.28ರಂದು ನಡೆಯಲಿದೆ ಎಂದು ದರ್ಗಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಿಜಾಮುದ್ದಿನ್ ಹೇಳಿದರು.
ಈ ಕುರಿತು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಹಮ್ಮದ್ ನಿಜಾಮುದ್ದಿನ್, ಉರೂಸ್ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಹಿಂದಿನ ಸಂಪ್ರಾದಾಯದಂತೆ ಎಳ್ಳ ಅಮವಾಸ್ಯೆಯ ನಂತರದ ಮೊದಲ ಅಥವಾ ಎರಡನೇ ರವಿವಾರ ಬಡೇಸಾಬ್ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಈ ಬಾರಿ ಡಿ.27ರಂದು ರಾತ್ರಿ 10.30ಗಂಟೆಯಿಂದ ಡಿ.28ರ ಮುಂಜಾನೆ 5 ಗಂಟೆಯವರೆಗೆ ಸಂದಲ್ ಷರೀಫ್ ಗಂಧ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಡಿ.28ರ ಬೆಳಿಗ್ಗೆ 5 ಗಂಟೆಗೆ ಸೈಯದ್ ಹಫೀಜುಲ್ಲಾ ಖಾದ್ರಿಯವರಿಂದ ಫಾತಿಯಾ ಕಾರ್ಯಕ್ರಮ ನೆರವೇರಿಸುವ ಮೂಲಕ 127ನೇ ಬಡೇಸಾಬ್ ಉರುಸ್‌ಗೆ ಚಾಲನೆ ನೀಡಲಾಗುವುದು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಡಿ.29ರಂದು ಝಿಯಾರತ್ ಕಾರ್ಯಕ್ರಮ ನಡೆಯಲಿದ್ದು, ಉರೂಸ್ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಂಸದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ, ಮಾಜಿ ಸಂಸದ ಬಿ.ವಿ.ನಾಯಕ, ಬಸವರಾಜ ಪಾಟೀಲ್ ಇಟಗಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹೆಬೂಬ್ ಪಟೇಲ್, ಬಂಡಾರಿ ಫಕ್ರುದ್ದಿನ್ ಪಟೇಲ್, ಆಜೀಮ್ ಅಲಂ, ಮಹ್ಮದ್ ರಫೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.