ರಾಯಚೂರು | ಪೊಲೀಸರಿಂದ ಅವಮಾನ, ಹಣ ನೀಡುವಂತೆ ಬೆದರಿಕೆ ಆರೋಪ: ಎಸ್‌ಪಿ ಮೊರೆ ಹೋದ ಯುವಕ
ರಾಯಚೂರು : ಪೊಲೀಸರ ಮಾನಸಿಕ ಹಿಂಸೆಯಿಂದ ನೊಂದ ಯುವಕನೊರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮೊರೆ ಹೋದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಪ್ರೇಮಿಗಳಿಬ್ಬರ ಕುರಿತು ಸಂಧಾನದ ಮೂಲಕ ಇತ್ಯಾರ್ಥಗೊಂಡಿರುವ ಪ್ರಕರಣವನ್ನಿಟ್ಟುಕೊಂಡು ಪೊಲೀಸರು ಮಾನಸಿಕ ಹಿಂಸೆ ನೀಡಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದ ಯುವಕನೋರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಮಾವಿನಭಾವಿ ಗ್ರಾಮದ ನಿವಾಸಿಯಾದ ಯುವಕ ಅದೇ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಬಂಧಪಟ್ಟ ಮುದಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಠಾಣೆಯಲ್ಲಿ ರಾಜಿ ಸಂಧಾನ ನಡೆದಿದೆ. ತಾವೇ ಸಂಧಾನದ ಮೂಲಕ ಅಂತ್ಯಗೊಳಿಸಿ, ಈಗ ಈ ಪ್ರಕರಣವನ್ನು ಇಟ್ಟುಕೊಂಡು ಮುದಗಲ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ವೀರಭದ್ರಪ್ಪ, ಶರಣಪ್ಪ ಹಾಗೂ ರಾಮಪ್ಪ ಪ್ರತಿ ದಿನ ದೂರವಾಣಿ ಕರೆಗಳನ್ನು ಮಾಡಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಜೂ.20 ರಂದು ಮುದಗಲ್ ಠಾಣೆಗೆ ಕರೆಸಿದ ಪೊಲೀಸರು ನನ್ನ ಬಟ್ಟೆಗಳನ್ನು ಬಿಚ್ಚಿಸಿ ಅವಮಾನ ಮಾಡಿದ್ದಾರೆ. ನನ್ನನ್ನು ಊಟಕ್ಕೆಂದು ಮುದಗಲ್ ನ ಚಂದನ ಡಾಬಾಗೆ ಕರೆದುಕೊಂಡು ಹೋಗಿ ಅಲ್ಲಿ ಮದ್ಯಪಾನ ಊಟ ಮಾಡಿ 1,142 ರೂ. ಗಳನ್ನು ನನ್ನಿಂದಲೇ ಪಾವತಿಕೊಂಡಿದ್ದಲ್ಲದೆ, ಪೆಟ್ರೋಲ್ ಗಾಗಿ 500 ರೂ. ಗಳನ್ನೂ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಲವಂತವಾಗಿ ಮೊಬೈಲ್ ಫೋನ್ ಕಸಿದುಕೊಂಡು ಫೋನ್ ಪೇ ನಲ್ಲಿದ್ದ 8,000 ರೂ. ಗಳನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಅಷ್ಟೇ ಅಲ್ಲದೇ ನೀನಿನ್ನೂ ಹಣವನ್ನು ಪಾವತಿಸಬೇಕು. ಪಾವತಿಸದಿದ್ದರೆ ಇತ್ಯರ್ಥಗೊಂಡಿರುವ ಪ್ರಕರಣದಲ್ಲಿ ಮತ್ತೊಮ್ಮೆ ನಿನ್ನನ್ನೇ ತಪ್ಪಿತಸ್ಥನೆಂದು ಬಿಂಬಿಸಿ ಎಫ್ಐಆರ್ ದಾಖಲಿಸುತ್ತೇವೆ ಎಂದು ಪ್ರತಿದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರಿಂದ ನನಗೆ ರಕ್ಷಣೆ ನೀಡಬೇಕು ಎಂದು ಯುವಕ ಎಸ್ ಪಿ ಅವರ ಬಳಿ ಮನವಿ ಮಾಡಿದ್ದಾನೆ.