×
Ad

ಶೋಷಿತರು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಸಾಹಿತಿಗಳು ಜಾಗೃತಗೊಳಿಸಿದ್ದಾರೆ : ಸಚಿವ ಎನ್.ಎಸ್.ಬೋಸರಾಜು

11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

Update: 2025-12-21 20:07 IST

ರಾಯಚೂರು, ಡಿ.21: ಸರ್ಕಾರದ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಸಿಗುವ ಹಕ್ಕುಗಳನ್ನು ಪಡೆಯಲು ಅನೇಕ ಹೋರಾಟಗಳು ನಡೆದಿವೆ, ಜೊತೆಗೆ ಸಾಹಿತ್ಯದ ಚಟುವಟಿಕೆಗಳ ಮೂಲಕ ಧ್ವನಿ ಎತ್ತುವ ಪ್ರಯತ್ನಗಳು ಈ ಭಾಗದಲ್ಲಿ ದಲಿತ ಸಾಹಿತ್ಯ ಪರಿಷತ್ತಿನಿಂದ ನಡೆದಿರುವುದು ಸಂತಸದ ವಿಚಾರ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ರಾಯಚೂರಿನಲ್ಲಿ ನಡೆದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರ,ಶೋಷಿತರ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಗಳು ನಡೆಯುವುದು ಹೆಚ್ಚಾಗಬೇಕು. ಸಾಹಿತ್ಯ ಸಮ್ಮೇಳನಗಳಿಂದ ಸಂಘಟಿತ ಪ್ರಯತ್ನಗಳಾಗುತ್ತವೆ ಮತ್ತು ಶೋಷಿತರ ಸಮಾಜದ ನೋವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.

ವಿವಿಧ ಭಾಗಗಳಿಂದ ಬಂದಿರುವ ಸಾಹಿತಿಗಳು ಸೇರಿ ತಮ್ಮ ಸಾಹಿತ್ಯಗಳ ಮೂಲಕ ಕವಿ ಗೋಷ್ಠಿಗಳ ಮುಖಾಂತರ ದೇಶಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. ಸಮ್ಮೇಳನ ಮೂಲಕ ಅನೇಕ ಯುವ ಸಾಹಿತಿಗಳನ್ನೂ ಕೂಡ ಪ್ರೋತ್ಸಾಹಿಸಲಾಗುತ್ತಿದೆ. ಈ ಮುಂದಿನ ವರ್ಷದಲ್ಲಿ ಹೆಚ್ಚಿನ ಅನುದಾನ ಪಡೆಯುವ ಮೂಲಕ ಈ ಭಾಗದ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಯೋಜನೆಯನ್ನು ರೂಪಿಸಲಾಗುವುದು. ಬರುವ ದಿನಗಳಲ್ಲಿ ಈ ಭಾಗದ ಸಾಹಿತಿಗಳಿಗೆ ಹೆಚ್ಚಿನ ಮಾರ್ಗದರ್ಶನ ಸಿಗಬೇಕು ಎಂದು ತಿಳಿಸಿದರು.

ಇದೇ ವೇಳೆ ಏಳು ಜನ ಸಾಹಿತಿಗಳಿಗೆ ಹಾಗೂ ಹೋರಾಟಗಾರರಿಗೆ ರಾಷ್ಟ್ರೀಯ ಪ್ರಶಸ್ತಿ, ಬ್ರಹದ್ದೇಶಿ ರಾಷ್ಟ್ರೀಯ ಪ್ರಶಸ್ತಿ, ದಲಿತ ಚೆನತ ರಾಷ್ಟ್ರೀಯ ಪ್ರಶಸ್ತಿ, ಮೂಕನಾಯಕ ರಾಷ್ಟ್ರೀಯ ಪ್ರಶಸ್ತಿ, ರಮಾಬಾಯಿ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರತ್ನ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಸಸ್ತಿ, ದಲಿತ ಕಲಾ ಸಿರಿ ರಾಷ್ಟ್ರೀಯ ಪ್ರಶಸ್ತಿ, ದಲಿತ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜೊತೆಗೆ ಐದು ಜನರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ, 24 ಜನ ಬರಹಗಾರರಿಗೆ ರಾಷ್ಟ್ರೀಯ ಪುಸ್ತಕ ಪ್ರಸಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕತರಾದ ಬಾಬು ಭಂಡಾರಿಗಲ್, ಡಾ.ಪದ್ಮಿನಿ ನಾಗರಾಜು, ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಡಾ.ಕೆ.ಪಿ.ಮಹಾದೇವ, ಡಾ.ಅಮರೇಶ ಯತಗಲ್, ಡಾ.ಜೆ.ಪಿ ದೊಡಮನಿ, ಡಾ.ಸೂರ್ಯಕಾಂತ ಸುಜ್ಯಾತ ಸೇರಿ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News