×
Ad

ರಾಯಚೂರು | ಶೌಚಾಲಯ ಸೌಲಭ್ಯ ಕೇಳಿದ ಮಹಿಳೆಯೊಂದಿಗೆ ಮಾಜಿ ಶಾಸಕ ವಾಗ್ವಾದ

Update: 2025-12-21 23:51 IST

ರಾಯಚೂರು : ನಗರದ ವಾರ್ಡ್ ನಂ.24ರಲ್ಲಿ 8 ಕೋಟಿ ರೂ. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು ಅವರು ಭೂಮಿಪೂಜೆ ನೆರವೇರಿಸಲು ಆಗಮಿಸಿದ ವೇಳೆ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಹಾಗೂ ಮಹಿಳೆಯೊಬ್ಬರ ನಡುವೆ ವಾಗ್ವಾದ ನಡೆದ ಘಟನೆ ಭಾನುವಾರ ನಡೆದಿದೆ.

ಸಾರ್ವಜನಿಕ ಅಹವಾಲು ಸಲ್ಲಿಸುವ ವೇಳೆ ಮಹಿಳೆಯೊಬ್ಬರು ತಮ್ಮ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿ, ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದರು. ಈ ವೇಳೆ ಅವರು ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಅಲ್ಲಿಯೇ ಇದ್ದ ಮಾಜಿ ಶಾಸಕ ಎ.ಪಾಪಾರೆಡ್ಡಿ ನಿಧಾನವಾಗಿ ಮಾತನಾಡುವಂತೆ ಸೂಚಿಸಿದರು. ಇದರಿಂದ ಕೋಪಗೊಂಡ ಮಹಿಳೆ, ಸಮಸ್ಯೆಯನ್ನು ಸ್ಥಳಕ್ಕೆ ಬಂದು ನೋಡಬೇಕೆಂದು ಪ್ರತಿಕ್ರಿಯಿಸಿದರು.

ಈ ಮಾತುಕತೆಯ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಹಿಳೆ, ಗದರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿ, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಇದರಿಂದ ಅಸಮಾಧಾನಗೊಂಡ ಪಾಪಾರೆಡ್ಡಿ ತಮ್ಮ ಬೆಂಬಲಿಗರ ಮೇಲೂ ಆಕ್ಷೇಪ ವ್ಯಕ್ತಪಡಿಸಿದರು.

ವಾಗ್ವಾದದ ಸಂದರ್ಭದಲ್ಲಿ ಸಚಿವ ಎನ್.ಎಸ್. ಬೋಸರಾಜು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಮನಗೊಳಿಸಲು ಪ್ರಯತ್ನಿಸಿದರು. ಅಲ್ಲದೆ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಅವರು ವೈಯಕ್ತಿಕ ಶೌಚಾಲಯ ನಿರ್ಮಿಸುವ ಕುರಿತು ಪರಿಹಾರ ಸೂಚಿಸಿದರು.

ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು. ಇದರಿಂದ ಪರಿಸ್ಥಿತಿ ತಿಳಿಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News