ಪೋಲಿಯೋ ಮುಕ್ತ ದೇಶದ ಕನಸು ನನಸಾಗಿಸಲು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ: ಸಚಿವ ಎನ್.ಎಸ್.ಬೋಸರಾಜು
ರಾಯಚೂರು : ಪೋಲಿಯೋ ವೈರಸ್‌ನಿಂದ ಜೀವನ ಪರ್ಯಂತ ಅಂಗವಿಕಲತೆ ಉಂಟು ಮಾಡುವುದನ್ನು ತಡೆಯಲು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಹಾಕಿಸಿದ್ದರೂ ಸಹ ಮತ್ತೆ ಈಗಲೂ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತು ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ರಿಮ್ಸ್ ಆಸ್ಪತ್ರೆ, ನವೋದಯ ವೈದ್ಯಕೀಯ ಕಾಲೇಜು, ರೋಟರಿ, ಲಯನ್ಸ್ ಕ್ಲಬ್, ರೆಡ್‌ಕ್ರಾಸ್, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಯೋಗದಲ್ಲಿ ನಗರದ ಕೆ.ಇ.ಬಿ ಕಾಲೋನಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿ.21ರಂದು ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1994 ರಿಂದ ಅಭಿಯಾನದ ರೂಪದಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಕೈಗೊಂಡು ನಮ್ಮ ದೇಶದಲ್ಲಿ ಕಳೆದ 14 ವರ್ಷಗಳಿಂದ ಯಾವುದೇ ಪ್ರಕರಣ ವರದಿಯಾಗದಂತೆ ಸರಕಾರವು ಲಸಿಕೆ ಹಾಕುವ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2,59,984 ಮಕ್ಕಳಿಗೆ 1,133 ಮನೆ ಬೇಟಿ ತಂಡಗಳು, 33 ಮೊಬೈಲ್ ತಂಡ, 53 ಟ್ರಾನ್ಸಿಟ್ ತಂಡಗಳ ಮೂಲಕ 248 ಮೇಲ್ವಿಚಾರಣೆಯೊಂದಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ್ ನಾಯಕ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಲಸಿಕೆಗಳಿಂದಾಗಿ, ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಯುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಜನತೆ ಲಸಿಕೆಗಳ ಬಗ್ಗೆ ಯಾವುದೇ ಸಂಶಯ ವ್ಯಕ್ತಪಡಿಸದೇ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಲಸಿಕೆಗಳನ್ನು ಹಾಕಿಸಿ ರಾಯಚೂರು ಜಿಲ್ಲೆಯು ಈ ದಿಸೆಯಲ್ಲಿ ಮುಂಚೂಣಿಯಲ್ಲಿರಲು ಪ್ರತಿಯೊಬ್ಬರೂ ಸಹಕರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದು, ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ, ಆರ್‌ಸಿಹೆಚ್ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ವಿಜಯೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್., ಸರ್ವೇಕ್ಷಣಾಧಿಕಾರಿ ಡಾ ಗಣೇಶ್ ಕೆ, ರೋಟರಿ ಸಂಸ್ಥೆಯ ತ್ರಿವಿಕ್ರಮ ಜೋಷಿ, ಮುಖಂಡರಾದ ಜಯಣ್ಣ, ಜಯವಂತರಾವ್ ಪತಂಗೆ, ಜಿಲ್ಲಾ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಡಾ.ಈರಣ್ಣ ಕೋಸಗಿ, ಶಿಶು ಅಭಿವೃದ್ಧಿ ಯೋಜನಧಿಕಾರಿ ಮಂಜುನಾಥ, ಮನ್ಸೂರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಈಶ್ವರ ಹೆಚ್ ದಾಸಪ್ಪನವರ, ರೇಡ್‌ಕ್ರಾಸ್ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ, ಮಾನವ ಹಕ್ಕುಗಳ ಸಂಘಟನೆಯ ಚಂದ್ರಶೇಖರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ರಾಜಶೇಖರ ಪಾಟೀಲ್, ಹೀರಾಲಾಲ್ ಮುಖ್ಯ ಗುರುಗಳು, ಡಿಪಿಎಮ್ ನವೀನ್, ಐಎಫ್‌ವಿ ಕೋಪ್ರೇಶ್, ಗುರು ಗಂಪಾ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ರೋಟರಿ, ಲಯನ್ಸ್, ಸೇರಿದಂತೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.