ರಾಯಚೂರು : ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ʼಅಕ್ಕ ಪಡೆʼ ಸಜ್ಜು
ರಾಯಚೂರು: ಮಹಿಳೆಯರ,ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಕ್ಕ ಪಡೆ ಸಜ್ಜಾಗಿದ್ದು, ರಾಯಚೂರು ಜಿಲ್ಲೆಯ ಎಸ್‍ಪಿ ಎಂ ಪುಟ್ಟಮಾದಯ್ಯ ಅವರು ಅಕ್ಕ ಪಡೆ ಕಾರ್ಯಾಚರಣೆಗೆ ಚಾಲನೆ ನೀಡಿದರು.
ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡು ಮತ್ತು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಸುಧಾರಣೆ ತರುವ ಜೊತೆಗೆ ಸಮಾಜದಲ್ಲಿ ಕಾನೂನು ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾದ ಅಕ್ಕ ಪಡೆಯ ಜಿಲ್ಲಾ ಪಡೆ ಇನ್ನು ಮುಂದೆ ರಾಯಚೂರು ನಗರದಲ್ಲೂ ಕೂಡ ಕಾರ್ಯ ನಿರ್ವಹಿಸಲಿದೆ.
ಬೀದರ್ ಜಿಲ್ಲೆಯ ಗೃಹ ಇಲಾಖೆಯಿಂದ ರಚಿಸಲ್ಪಟ್ಟ ಅಕ್ಕ ಪಡೆಯ ಯಶಸ್ವಿ ಕಾರ್ಯವನ್ನು ರಾಜ್ಯ ಸರ್ಕಾರ ಪರಿಗಣಿಸಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಅಕ್ಕ ಪಡೆಯನ್ನು ವಿಸ್ತರಿಸಲಾಗಿದ್ದು, ಇಂದು ನಗರದ ಎಸ್‍ಪಿ ಕಚೇರಿಯಲ್ಲಿ ಅಕ್ಕ ಪಡೆಯ ವಾಹನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿ ಜಿಲ್ಲೆಯಾಧ್ಯಂತ ಮಹಿಳೆ ಮತ್ತು ಮಕ್ಕಳ ರಕ್ಷಣೆ , ಭಿಕ್ಷಾಟನೆ ತಡೆಯುವ ಕೆಲಸ ಅಕ್ಕಾ ಪಡೆ ಕಾರ್ಯನಿರ್ವಹಿಸಲಿದೆ. ಅಕ್ಕಾ ಪಡೆ ಸಾರ್ವಜನಿಕರ ಸಕಾಲಕ್ಕೆ ಸೇವೆ ಒದಗಿಸುವ ಮೂಲಕ ಪರಿಣಾಮಕಾರಿ ಯೋಜನೆ ಅನುಷ್ಟಾನಕ್ಕೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು, ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಕ್ಕ ಪಡೆಯ ಮೂಲ ಉದ್ದೇಶವಾಗಿದೆ ಎಂದರು.
ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವುದು, ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು, ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂದಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ ಎಂದು ತಿಳಿಸಿದರು.
ಅಕ್ಕ ಪಡೆಯ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಅವಶ್ಯಕತೆ ಇರುವ ಮಹಿಳೆಯರು ಮತ್ತು ಮಕ್ಕಳಿಗೆ ಈ ಅಕ್ಕ ಪಡೆ ಅನುಕೂಲವಾಗಲಿದ್ದು, ಜನರು ಕೂಡ ಜಾಗೃತರಾಗಬೇಕು ಎಂದು ಹೇಳಿದರು.