ʼವಾರ್ತಾಭಾರತಿʼ ಕಲ್ಯಾಣ ಕರ್ನಾಟಕಕ್ಕೆ ಕಾಲಿಡುತ್ತಿರುವುದು ಶ್ಲಾಘನೀಯ: ಸಂಜೀವಪ್ಪ ಛಲವಾದಿ
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಲಿಂಗಸುಗೂರಿನಲ್ಲಿ ಓದುಗ, ಹಿತೈಷಿಗಳ ಸಭೆ
ರಾಯಚೂರು: ನಾಡಿನ ಧ್ವನಿಯಾಗಿ ಮಂಗಳೂರಿನಿಂದ ಆರಂಭವಾದ ವಾರ್ತಾಭಾರತಿ ಪತ್ರಿಕೆಯು ಶಿವಮೊಗ್ಗ, ಬೆಂಗಳೂರಿನ ಬಳಿಕ ಈಗ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಲಿಡುತ್ತಿರುವುದು ಶ್ಲಾಘನೀಯ ಎಂದು ರಾಯಚೂರಿನ ಛಲವಾದಿ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಪದವಿಧರ ವಿಭಾಗದ ಅಧ್ಯಕ್ಷ ಸಂಜೀವಪ್ಪ ಛಲವಾದಿ ಹೇಳಿದರು.
ಜಿಲ್ಲೆಯ ಲಿಂಗಸುಗೂರು ಪಟ್ಟಣದ ಐಎಂಎ ಹಾಲ್ ನಲ್ಲಿ ಸೋಮವಾರ ʼವಾರ್ತಾಭಾರತಿʼ ಕಲಬುರಗಿಯಿಂದ ಕಲ್ಯಾಣ ಕರ್ನಾಟಕ ಆವೃತ್ತಿ ಬಿಡುಗಡೆಯ ಪ್ರಯುಕ್ತ ಓದುಗರ, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕೋದ್ಯಮ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ. ಮೂರು ಅಂಗಗಳು ಕೆಲಸ ಮಾಡದಿದ್ದಲ್ಲಿ ಪತ್ರಿಕಾರಂಗಕ್ಕೆ ಟೀಕೆ ಮಾಡುವ ಅಧಿಕಾರವಿದೆ. ಅದನ್ನು ಪತ್ರಕರ್ತರು ಸರಿಯಾಗಿ ಬಳಸಿಕೊಳ್ಳಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೂಕನಾಯಕ ಪತ್ರಿಕೆಯ ಮೂಲಕ ಶೋಷಿತರ, ಅಲ್ಪಸಂಖ್ಯಾತರ ಧ್ವನಿಯಾಗಿದ್ದರು. ಪತ್ರಕರ್ತರು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗುರುಬಸವ ಆಸ್ಪತ್ರೆಯ ವೈದ್ಯ ಡಾ.ವಿಜಯಕುಮಾರ್ ಮಾತನಾಡಿ, ಇಂದಿನ ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮಲ್ಲಿಯೇ ಮೊದಲು ಎಂದು ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಸುದ್ದಿ ಮಾಡುತ್ತಿದ್ದಾರೆ. ಇದರಿಂದ ವಿಶ್ವಾಸಾರ್ಹತೆ ಮೇಲೆ ಧಕ್ಕೆ ಮೂಡುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಇದರ ಮೇಲೆ ವಾರ್ತಾಭಾರತಿ ಪರಿಹಾರಕ್ಕೆ ಮುಂದಾಬೇಕು ಎಂದು ಹೇಳಿದರು.
ಟಿವಿ ಚಾನೆಲ್ ಸ್ಟೂಡಿಯೊಗಳಲ್ಲಿ ಚರ್ಚೆಯ ವೇಳೆ ಕಿರುಚಾಟ, ಏಕಮುಖ ಅಭಿಪ್ರಾಯ ನಡೆಯುತ್ತಿದೆ. ನಮ್ಮ ಕಲ್ಯಾಣ ಕರ್ನಾಟಕ ಸಂಪದ್ಭರಿತ, ಸಂತ, ಶರಣರ, ಸೂಫಿಗಳ ನಾಡು. ವಿಶ್ವದಲ್ಲಿಯೇ ಮೊದಲ ಬಾರಿಗೆ ಸಂಸತ್ತು ಪದ್ದತಿ ಇಲ್ಲಿ ಬಳಕೆಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನರ ಅನುಭವ ಮಂಟಪದಲ್ಲಿ ಸರ್ವರಿಗೂ ಸಮಾಪಾಲು, ಸಮಾಬಾಳು, ತುಳಿತಕ್ಕೆ ಒಳಗಾದ, ಹಿಂದುಳಿದ ಸಮುದಾಯಗಳಿಗೆ ಓದು ಬರಹ ಕಲಿಸಿದ ನಾಡು ಎಂದು ಅವರು ಉಲ್ಲೇಖಿಸಿದರು.
ಲಿಂಗಸುಗೂರು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಆಶಿಕ್ ಅಹ್ಮದ್ ಮಾತನಾಡಿ, ಲೇಖನಿ ತುಂಬ ಹರಿತವಾದದ್ದು, ಪ್ರತಿಯೊಂದು ಅಕ್ಷರಕ್ಕೆ ಬೆಲೆ ಇದೆ. ಪತ್ರಕರ್ತರು ನಿಜವಾದ ಸಂಗತಿ ಬರೆಯಬೇಕು, ಗೊಂದಲ ಮೂಡಿಸುವಂತಿರಬಾರದು.
ಇಂದಿನ ದಿನಗಳಲ್ಲಿ ಸತ್ಯವನ್ನು ಬರೆಯಲು ಅನೇಕ ಸವಾಲುಗಳಿವೆ. ಸುಳ್ಳುಗಳ ಮಧ್ಯೆ ಸತ್ಯ ಗಟ್ಟಿಯಾಗಿ ನಿಂತುಕೊಂಡಿದೆ. ನಾನು 25 ವರ್ಷಗಳಿಂದ ಪತ್ರಿಕೆಯನ್ನು ಓದುತ್ತಾ ಬಂದಿದ್ದೇನೆ. ಆದರೂ ಅನೇಕ ಸವಾಲುಗಳ ಮಧ್ಯೆ ಪತ್ರಕರ್ತರು ಧೈರ್ಯವಾಗಿ ಬರೆಯುವ ಮೂಲಕ ಪತ್ರಿಕೋದ್ಯಮದ ಆಶಯವನ್ನು ಕಾಪಾಡಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ವಾರ್ತಾಭಾರತಿ ಪತ್ರಿಕೆಯು ಸತ್ಯ, ನಿಷ್ಠೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ್ ಸಿದ್ದೀಖಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುನವರ್ರುದ್ದೀನ್ ಖಾಜಿ, ಅಬ್ದುಲ್ ಕರೀಮ್, ಜಹೀರುದ್ದೀನ್ (ಗೌಸ್) ನಿರ್ವಹಿಸಿದರು.
ಡಿಸೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.