ನೆಲಮೂಲದ ಸ್ಮತಿಗಳನ್ನು ಕೆದಕುವ ‘ಅದಲು ಬದಲು ಕಂಚಿ ಕದಲು’

Update: 2026-07-21 12:33 IST

ನಾಟಕ: ಅದಲು ಬದಲು ಕಂಚಿ ಕದಲು

ರಚನೆ: ಲಕ್ಷ್ಮೀಪತಿ ಕೋಲಾರ

ನಿರ್ದೇಶನ: ಉದಯ್ ಸೋಸಲೆ

ಪ್ರಸ್ತುತಿ: ಆಜೀವಿಕ

ಇತಿಹಾಸವನ್ನು ಕೇವಲ ಅರಮನೆಗಳಲ್ಲೂ, ರಾಜವಂಶಗಳಲ್ಲೂ ಹುಡುಕುವ ಪರಿಪಾಠಕ್ಕೆ ವಿರುದ್ಧವಾಗಿ, ಜನಪದದ ಸ್ಮತಿಗಳು, ಅಲೆಮಾರಿ ಸಮುದಾಯಗಳ ಬದುಕು, ಮರೆತುಹೋದ ದೇವತೆಗಳು ಮತ್ತು ಮೌಖಿಕ ಪರಂಪರೆಗಳೊಳಗೆ ಅನ್ವೇಷಿಸುವ ಪ್ರಯತ್ನವೇ ‘ಅದಲು ಬದಲು ಕಂಚಿ ಕದಲು’. ಇದು ಕೇವಲ ಒಂದು ನಾಟಕವಲ್ಲ, ನಮ್ಮ ಸಾಂಸ್ಕೃತಿಕ ನೆನಪುಗಳನ್ನು ಪ್ರಶ್ನಿಸುವ, ಅಳಿಸಲ್ಪಟ್ಟ ಗುರುತುಗಳನ್ನು ಹುಡುಕುವ ರಂಗಪ್ರಯೋಗ.

ಜನಪದ ಸಂಶೋಧಕ, ಇತಿಹಾಸಕಾರ ಲಕ್ಷ್ಮೀಪತಿ ಕೋಲಾರ ಅವರ ದೀರ್ಘಕಾಲದ ಜನಪದ ಮತ್ತು ಸಾಂಸ್ಕೃತಿಕ ಅಧ್ಯಯನದ ಒಂದು ಪ್ರಮುಖ ಚಿಂತನೆ ಈ ನಾಟಕದ ಮೂಲಕ ರಂಗರೂಪ ಪಡೆದಿದೆ. ಲಕ್ಷ್ಮೀಪತಿ ಕೋಲಾರ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವ್ಯಕ್ತಿತ್ವ. ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕ ಹಾಗೂ ಹವ್ಯಾಸಿ ಪತ್ರಕರ್ತರಾಗಿ ಅವರು ಸಲ್ಲಿಸಿರುವ ಕೊಡುಗೆಗಳು ಕನ್ನಡದ ಬೌದ್ಧಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಜಾನಪದ ಸಂಸ್ಕೃತಿಯನ್ನು ಕೇವಲ ಅಧ್ಯಯನದ ವಿಷಯವಾಗಿ ಅಲ್ಲದೆ, ಸಮಕಾಲೀನ ಸಮಾಜದ ಬದುಕು, ಇತಿಹಾಸ ಮತ್ತು ಸಾಂಸ್ಕೃತಿಕ ಸ್ಮತಿಯೊಂದಿಗೆ ಜೋಡಿಸಿ ನೋಡುವ ದೃಷ್ಟಿಕೋನ ಅವರ ಬರಹಗಳ ಪ್ರಮುಖ ಲಕ್ಷಣವಾಗಿದೆ. ಸಾಹಿತ್ಯ, ರಂಗಭೂಮಿ ಮತ್ತು ವಿಮರ್ಶೆಯ ಮೂಲಕ ಅವರು ಜನಪದ ಮತ್ತು ಆಧುನಿಕತೆಯ ನಡುವೆ ಸೃಜನಾತ್ಮಕ ಸಂವಾದವನ್ನು ರೂಪಿಸಿದ್ದಾರೆ. ‘ವಾರ್ತಾಭಾರತಿ’ಯ 22ನೇ ವಿಶೇಷಾಂಕದಲ್ಲಿ ಅವರು ಮಂಡಿಸಿರುವ ‘ಕೊ-ಕೋಲಿ-ಕೊರವಿ: ದ್ರಾವಿಡ ಸಂಸ್ಕೃತಿಯ ತಾಯಿಬೇರು’ ಓದಿದರೆ ‘ಅದಲು ಬದಲು ಕಂಚಿ ಕದಲು’ ನಾಟಕ ಸುಲಭವಾಗಿ ಅರ್ಥವಾಗುತ್ತದೆ. (Link :https://www.varthabharati.in/ko-koli-koravi-is-the-mother-root-of-dravidian-culture/22nd-annual-special/news-2046428)

ಲಕ್ಷ್ಮಿಪತಿ ಕೋಲಾರ ಅವರ ಕತೆಯನ್ನು ನಿರ್ದೇಶಕ ಉದಯ್ ಸೋಸಲೆ ಕೇವಲ ಕಥೆಯಾಗಿ ಹೇಳದೆ ದೃಶ್ಯ, ಸಂಗೀತ, ಸಂಕೇತ ಮತ್ತು ಅಭಿನಯದ ಮೂಲಕ ಪ್ರೇಕ್ಷಕರನ್ನು ಒಂದು ಐತಿಹಾಸಿಕ ಸಂವಾದದೊಳಗೆ ಕರೆದುಕೊಂಡು ಹೋಗುತ್ತಾರೆ.

ನಾಟಕದ ಕೇಂದ್ರದಲ್ಲಿರುವುದು ಕೊರವಿ ಎಂಬ ನೆಲಮೂಲ ದೇವತೆಯ ಪಯಣ. ಆ ದೇವತೆ ಹೇಗೆ ತನ್ನ ಮೂಲ ಸಾಮಾಜಿಕ ಸನ್ನಿವೇಶದಿಂದ ದೂರವಾಗಿ, ಅಧಿಕಾರದ ಧಾರ್ಮಿಕ ರಾಜಕಾರಣದ ಮೂಲಕ ಹೊಸ ಹೆಸರನ್ನು, ಹೊಸ ರೂಪವನ್ನು ಪಡೆಯುತ್ತಾಳೆ ಎಂಬುದನ್ನು ನಾಟಕ ರೂಪಕಾತ್ಮಕವಾಗಿ ಕಟ್ಟಿಕೊಡುತ್ತದೆ. ಇದು ಯಾವುದೇ ಒಂದು ದೇವತೆಯ ಕಥೆಯಷ್ಟೇ ಅಲ್ಲ; ಭಾರತದ ಅನೇಕ ಸ್ಥಳೀಯ ಆರಾಧನೆಗಳು, ಜನಪದ ನಂಬಿಕೆಗಳು ಮತ್ತು ಸಮುದಾಯಗಳ ಸಾಂಸ್ಕೃತಿಕ ಅನುಭವಗಳು ಹೇಗೆ ಪ್ರಧಾನ ಧಾರೆಯೊಳಗೆ ಸೇರಿಸಲ್ಪಟ್ಟವು ಎಂಬ ವಿಶಾಲ ಚರ್ಚೆಗೆ ನಾಂದಿ ಹಾಡುತ್ತದೆ.

ಮೂಲನಿವಾಸಿಗಳ ಕೊರವಿ ದೇವತೆಯು ಮಾರಮ್ಮಳಾಗಿ ಬ್ರಾಹ್ಮಣರ ದೇವರಾಗುವಂತಹದ್ದೇ ಪ್ರಸಂಗ ಈಗಲೂ ನಮ್ಮ ನೆಲದಲ್ಲಿ ನಡೆಯುತ್ತಿದೆ. ಇದು ಕೊರವಿಗೆ ಮಾತ್ರ ಸಂಬಂಧಿಸಿದ್ದಲ್ಲ. ಭೂತಾರಾಧನೆ ಅಥವಾ ದೈವಾರಾಧನೆ ಎನ್ನುವುದು ಕರಾವಳಿ ಕರ್ನಾಟಕ ಮತ್ತು ತುಳುನಾಡಿನ ಮೂಲನಿವಾಸಿಗಳ ಪ್ರಾಚೀನ ಸಂಪ್ರದಾಯವಾಗಿದೆ. ಕಾಲಕ್ರಮೇಣ, ವೈದಿಕ ಸಂಸ್ಕೃತಿಯ ಪ್ರಭಾವದಿಂದ ಈ ಆಚರಣೆಗಳಲ್ಲಿ ಬದಲಾವಣೆಗಳಾಗುತ್ತಿದೆ. ಭೂತಗಳು ಅಥವಾ ದೈವಗಳ ಮೂಲ ಕಥೆಗಳಿಗೆ ಪುರಾಣ, ರಾಮಾಯಣ ಅಥವಾ ಮಹಾಭಾರತದ ಕಥೆಗಳನ್ನು ಜೋಡಿಸಿ, ಅವುಗಳನ್ನು ಹಿಂದೂ ದೇವಾನುದೇವತೆಗಳ ಪರಿವಾರಕ್ಕೆ ಸೇರಿಸುವ ಪ್ರಯತ್ನ ನಡೆದಿದೆ. ಮೂಲ ಸಂಪ್ರದಾಯದಲ್ಲಿ ಪ್ರಾಣಿ ಬಲಿಗೆ ಪ್ರಾಮುಖ್ಯತೆಯಿತ್ತು. ವೈದಿಕ ಪ್ರಭಾವ ಹೆಚ್ಚಾದಂತೆ ಇವುಗಳಲ್ಲಿ ಹಲವನ್ನು ನಿಷೇಧಿಸಿ, ಸಸ್ಯಾಹಾರ, ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವ ಪದ್ಧತಿ ರೂಪುಗೊಂಡಿದೆ. ದೈವಗಳನ್ನು ಕರೆಯುವಾಗ ಮೂಲ ಮೌಖಿಕ ನುಡಿಗಳು ಮತ್ತು ಪಾಡ್ದನಗಳೊಂದಿಗೆ ಸಂಸ್ಕೃತ ಮಂತ್ರಗಳು ಮತ್ತು ಹೋಮ-ಹವನಗಳನ್ನು ಸೇರಿಸಿಕೊಳ್ಳಲಾಗಿದೆ.

ಸಾಂಪ್ರದಾಯಿಕವಾಗಿ ಮಧ್ಯಸ್ಥ ಅಥವಾ ಮನೆಯ ಹಿರಿಯ ಅಥವಾ ಪಾತ್ರಿಗಳು ಮಾತ್ರ ಮುಂಚೂಣಿಯಲ್ಲಿದ್ದ ಜಾಗದಲ್ಲಿ, ಇದೀಗ ಕೆಲವು ದೈವಸ್ಥಾನಗಳಲ್ಲಿ ಬ್ರಾಹ್ಮಣ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಈಗ ಕರಾವಳಿಯಲ್ಲೂ ನೆಲಮೂಲ ಸಂಸ್ಕೃತಿಯ ಹುಡುಕಾಟ ಶುರುವಾಗಿದೆ.

ಈ ಹುಡುಕಾಟದಲ್ಲಿ ನಾಟಕವು ದಕ್ಕಲಿಗರು, ಸಿಂಧೋಳರು, ಕೊರವಂಜಿಗಳು ಸೇರಿದಂತೆ ಅಂಚಿನ ಸಮುದಾಯಗಳನ್ನು ಮತ್ತೆ ನೆನಪಿಗೆ ತರುತ್ತದೆ. ಇತಿಹಾಸ ಬರೆಯುವವರು ಹೆಚ್ಚಾಗಿ ಮರೆಮಾಚಿದ ಜನರೇ ನಿಜವಾದ ಸಾಂಸ್ಕೃತಿಕ ಸಾಕ್ಷಿಗಳು ಎಂಬ ಅರ್ಥವನ್ನು ನಾಟಕ ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತದೆ. ಹೀಗಾಗಿ ಇದು ಕೇವಲ ಭೂತಕಾಲದ ಕಥೆಯಲ್ಲ. ಇಂದಿನ ಸಮಾಜದ ಜಾತಿ, ಅಸ್ಮಿತೆ ಮತ್ತು ಸಾಂಸ್ಕೃತಿಕ ರಾಜಕಾರಣದ ಕುರಿತ ಚರ್ಚೆಯೂ ಹೌದು.

ನಾಟಕದ ಅತ್ಯಂತ ಪರಿಣಾಮಕಾರಿ ಅಂಶಗಳಲ್ಲಿ ಒಂದು ಅದರ ಪ್ರಶ್ನೆಗಳು. ನಾಗರಿಕತೆ ಎಂದರೆ ಅಧಿಕಾರದ ಭಾಷೆಯನ್ನೇ ಒಪ್ಪಿಕೊಳ್ಳುವುದೇ? ಸ್ಥಳೀಯ ದೇವತೆಗಳಿಗೆ ಹೊಸ ಹೆಸರು ಬಂದರೆ ಅವುಗಳ ಮೂಲ ಇತಿಹಾಸವೂ ಅಳಿದುಹೋಗುತ್ತದೆಯೇ? ಮರೆತುಹೋದ ಪೂರ್ವಿಕರನ್ನು ನೆನಪಿಸಿಕೊಳ್ಳುವುದು ಕೇವಲ ಭಾವನಾತ್ಮಕ ಕ್ರಿಯೆಯೇ ಅಥವಾ ಅದು ಸಾಮಾಜಿಕ ನ್ಯಾಯದ ಹೋರಾಟವೂ ಆಗಬಹುದೇ? ಇಂತಹ ಪ್ರಶ್ನೆಗಳು ಪ್ರೇಕ್ಷಕರನ್ನು ನಾಟಕ ಮುಗಿದ ಮೇಲೂ ಕಾಡುತ್ತವೆ.

ಈ ನಾಟಕವನ್ನು ಯಾವ ಜಿಲ್ಲೆ, ಪ್ರದೇಶದ ಜನರೂ ತಮ್ಮದೇ ಸಾಂಸ್ಕೃತಿಕ ಮತ್ತು ಆರಾಧನೆಯ ಕತೆಗಳೆಂದು ಭಾವಿಸಬಹುದು. ಮಾರಮ್ಮ, ಅಣ್ಣಮ್ಮಗಳ ಗುಡಿಗೆ ಬ್ರಾಹ್ಮಣ ಅರ್ಚಕರ ನೇಮಕ, ಹನುಮಂತನ ಗುಡಿಗಳಿಗೆ ಬ್ರಾಹ್ಮಣ ಪೂಜಾರಿಗಳ ನೇಮಕ, ಕರಾವಳಿಯ ದೈವಾರಾಧನೆಯು ನಿಧಾನವಾಗಿ ವೈದಿಕೀಕರಣಗೊಳ್ಳುವುದನ್ನು ಈ ನಾಟಕದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಅಣ್ಣಪ್ಪ ದೈವ ಅಣ್ಣಪ್ಪ ಸ್ವಾಮಿಯಾಗುವುದು, ಪಂಜುರ್ಲಿ ದೈವ ನಟ ರಿಷಬ್ ಶೆಟ್ಟಿಯ ಮೂಲಕ ಮಾಂಸಾಹಾರ ದ್ವೇಷಿ ಎಂದು ಬಿಂಬಿತವಾಗುವುದು, ಜುಮಾದಿ ದೈವವು ಧೂಮಾವತಿಯಾಗುವುದು, ಕೊಡಮಣಿತ್ತಾಯ ದೈವವು ಕುಂಭಕಂಠಿನಿಯಾಗುವುದು ಇಂತಹದ್ದೇ ‘ಅದಲು ಬದಲು’ ಪ್ರಕ್ರಿಯೆಗಳು.

ರಂಗಸಜ್ಜೆ ಸರಳವಾಗಿದ್ದರೂ ಪರಿಣಾಮಕಾರಿಯಾಗಿದೆ. ಬೆಳಕು ಮತ್ತು ನೆರಳಿನ ವಿನ್ಯಾಸ ಕಥೆಯ ಒಳನೋಟಗಳನ್ನು ಪ್ರೇಕ್ಷಕರಿಗೆ ಅಡ್ಡಿ ಉಂಟು ಮಾಡುತ್ತದೆ. ಪ್ರೇಕ್ಷಕರತ್ತ ತೂರಿ ಬರುವ ಬೆಳಕು ಅಸಹನೀಯವಾಗಿದೆ. ಸಂಗೀತ ಮತ್ತು ಜನಪದ ಧ್ವನಿಗಳು ಕಥೆಯ ಭಾಗವಾಗಿ ಕೆಲಸ ಮಾಡುತ್ತವೆ. ಹಾಡುಗಳು ದೃಶ್ಯಗಳ ನಡುವಿನ ಸೇತುವೆಯಾಗಿ ನಿಂತು ಕತೆಗೊಂದು ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸುತ್ತವೆ. ಆದರೆ, ಈ ನಾಟಕವು ಬೌದ್ಧಿಕ ವಲಯಕ್ಕೆ ಸೀಮಿತವಾಗಿರುವಂತೆ ಭಾಸವಾಗುತ್ತದೆ. ಒಂದೊಳ್ಳೆ ಇತಿಹಾಸವನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ನಾಟಕವನ್ನು ರೂಪಿಸಬೇಕಾಗಿತ್ತು. ಪ್ರತಿಯೊಂದು ಪಾತ್ರಕ್ಕೂ ನಿರ್ದೇಶಕರು ಸಮಾನ ಪ್ರಾಮುಖ್ಯ ನೀಡಿದ್ದಾರೆ.

ಆಜೀವಿಕ ತಂಡ ತನ್ನ ಹತ್ತು ವರ್ಷಗಳ ಪಯಣವನ್ನು ಈ ನಾಟಕದ ಮೂಲಕ ಆಚರಿಸಿಕೊಂಡಿರುವುದು ಅರ್ಥಪೂರ್ಣ ಆಯ್ಕೆ. ಏಕೆಂದರೆ ‘ಅದಲು ಬದಲು ಕಂಚಿ ಕದಲು’ ಕೇವಲ ಮನರಂಜನೆಯ ರಂಗಪ್ರಯೋಗವಲ್ಲ. ಅದು ಜನಪದ, ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಬಗ್ಗೆ ಗಂಭೀರ ಸಂವಾದವನ್ನು ಆರಂಭಿಸುವ ಪ್ರಯತ್ನ.

ಎರಡೂವರೆ ಗಂಟೆಗಳ ಈ ನಾಟಕ ಪ್ರೇಕ್ಷಕರಿಗೆ ಸಿದ್ಧ ಉತ್ತರಗಳನ್ನು ಕೊಡುವುದಿಲ್ಲ. ಬದಲಿಗೆ, ನಾವು ಯಾರ ಮಕ್ಕಳು? ನಮ್ಮ ದೇವತೆಗಳು ಯಾರವು? ನಮ್ಮ ಸಾಂಸ್ಕೃತಿಕ ಸ್ಮತಿಗಳನ್ನು ಯಾರು ಬರೆದರು? ಯಾರು ಅಳಿಸಿದರು? ಎಂಬ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಉತ್ತರ ಸಿಗದ ಆ ಪ್ರಶ್ನೆಗಳನ್ನು ಹೊತ್ತು ಹುಡುಕಾಟಕ್ಕಾಗಿ ನಿರ್ಧರಿಸಿ ರಂಗಮಂದಿರದಿಂದ ನಿರ್ಗಮಿಸಿದರೆ ಅದೇ ಈ ನಾಟಕದ ನಿಜವಾದ ಯಶಸ್ಸು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News