ರಾಷ್ಟ್ರವಾದಿ ರಾಜಕೀಯವು ಗೆದ್ದಾಗ, ಮನುಷ್ಯ ಸೋತ ಕಥೆ
‘ಮಣ್ಣಿನ ಮಗ ಅರ್ಥಾತ್ ರಾಷ್ಟ್ರೀಯ ಸನ್ಯಾಸಿ’
ಕೀನ್ಯಾದ ಲೇಖಕ ನ್ಗುಗಿ ವಾ ಥಿಯೊಂಗೊ ಅವರ The Black Hermit ಕೃತಿಯನ್ನು ಕನ್ನಡಕ್ಕೆ ಸಮಕಾಲೀನ ರಾಜಕೀಯದ ನೆಲೆಯಲ್ಲಿ ಮರುಸೃಷ್ಟಿಸಿರುವ ‘ಮಣ್ಣಿನ ಮಗ ಅರ್ಥಾತ್ ರಾಷ್ಟ್ರೀಯ ಸನ್ಯಾಸಿ’ ನಾಟಕವು ಕೇವಲ ಒಂದು ಕಥೆಯಲ್ಲ. ಇದು ಇಂದಿನ ಭಾರತದ ರಾಜಕೀಯ, ಗುರುತಿನ ರಾಜಕಾರಣ, ರಾಷ್ಟ್ರೀಯತೆ, ಧರ್ಮ, ಜಾತಿ ಮತ್ತು ಅಧಿಕಾರದ ಹಪಾಹಪಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕಲಾಕೃತಿಯಾಗಿದೆ. ರಾಮ, ಕಪ್ಪು ಹಣ, ಧರ್ಮ, ವಿಶ್ವಗುರುವಾಗುವ ತವಕದಿಂದ ಹಿಡಿದು ಪೇಪರ್ ಲೀಕ್ ಹಾಗೂ ನೀಟ್ ಅಕ್ರಮಗಳನ್ನು ವಿರೋಧಿಸಿ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದವರೆಗಿನ ವಿಷಯಗಳನ್ನು ಈ ನಾಟಕ ಮಾತನಾಡುತ್ತದೆ.
ರಂಗಕರ್ಮಿ, ಚಲನಚಿತ್ರ ನಟ, ನಿರ್ದೇಶಕ ಮಹದೇವ ಹಡಪದ್ ಅವರ ನಿರ್ದೇಶನದಲ್ಲಿ ಈ ನಾಟಕವು ಮೂಲ ಕೃತಿಯ ಆಶಯವನ್ನು ಉಳಿಸಿಕೊಂಡು, ಅದಕ್ಕೆ ಭಾರತದ ಸಾಮಾಜಿಕ-ರಾಜಕೀಯ ಸಂದರ್ಭವನ್ನು ಬೆಸೆದಿರುವುದು ವಿಶೇಷ. ಹೀಗಾಗಿ ಈ ನಾಟಕ ಆಫ್ರಿಕಾದ ಕಥೆಯಾಗಿಯೇ ಉಳಿಯುವುದಿಲ್ಲ. ಅದು ಕರ್ನಾಟಕದ, ಭಾರತದ ಮತ್ತು ಜಗತ್ತಿನ ಎಲ್ಲ ಸಮಾಜಗಳ ಕಥೆಯಾಗಿ ರೂಪಾಂತರಗೊಳ್ಳುತ್ತದೆ. 1962ರಲ್ಲಿ ಆಫ್ರಿಕಾದಲ್ಲಿ ಬರೆಯಲ್ಪಟ್ಟ ನಾಟಕವನ್ನು ಮೋದಿಯ ಆಡಳಿತ ಕಾಲಕ್ಕೆ ನಿರ್ದೇಶಕ ಮಹದೇವ ಹಡಪದ್ ಅವರು ಮರುರಚಿಸಿದ್ದಾರೆ.
ನಾಟಕದ ಕೇಂದ್ರ ಪಾತ್ರವಾದ ರೆಮಿ/ರಾಮ (ಕನ್ನಡ ರೂಪಾಂತರದಲ್ಲಿ ‘ಮಣ್ಣಿನ ಮಗ’) ತನ್ನ ಹಳ್ಳಿಯಿಂದ ನಗರಕ್ಕೆ ಬಂದವನು. ಆತ ವೈಯಕ್ತಿಕ ಬದುಕು, ಪ್ರೀತಿ, ರಾಜಕೀಯ ಮತ್ತು ಸಾಮಾಜಿಕ ಹೊಣೆಗಾರಿಕೆಗಳ ನಡುವೆ ತೊಳಲಾಡುತ್ತಾನೆ. ಗ್ರಾಮ ಅವನನ್ನು ನಾಯಕನಾಗಿ ಬಯಸುತ್ತದೆ. ನಗರ ಅವನನ್ನು ತನ್ನೊಳಗೆ ಹೀರಿಕೊಳ್ಳುತ್ತದೆ. ಈ ಎರಡು ಜಗತ್ತುಗಳ ಮಧ್ಯೆ ಆತ ಕೊನೆಗೆ ತನ್ನನ್ನೇ ಕಳೆದುಕೊಳ್ಳುತ್ತಾನೆ.
ಇದು ಇಂದಿನ ರಾಜಕೀಯ ನಾಯಕರ ದುರಂತವೂ ಹೌದು. ಕೋಮು ರಾಜಕಾರಣಗಳ ಅಥವಾ ಆದರ್ಶಗಳ ಪ್ರತಿನಿಧಿಗಳಾಗಿ ಹೊರಟವರು ತಮ್ಮ ಮನೆಯ ಮಹಿಳೆಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಭಾರತದಲ್ಲಿ ಸಾಬೀತಾಗಿದೆ. ರಾಷ್ಟ್ರೀಯತೆ, ರಾಷ್ಟ್ರಕ್ಕಾಗಿ ಫಕೀರ ಎಂದವರು ತನ್ನ ಪತ್ನಿಯನ್ನು ಕೈ ಬಿಟ್ಟರು. ಅಧಿಕಾರದ ಕೇಂದ್ರಗಳಿಗೆ ತಲುಪಿದ ಮೇಲೆ ಕುಟುಂಬದಿಂದಲೇ ದೂರವಾಗುವುದು ಹೊಸ ಸಂಗತಿಯಲ್ಲ. ತತ್ವಗಳನ್ನು ಘೋಷಿಸುವುದು ಸುಲಭ. ಆದರೆ ಆ ತತ್ವಗಳಿಗಿಂತ ಮನುಷ್ಯನನ್ನು ದೊಡ್ಡವನಾಗಿ ಕಾಣುವುದು ಕಷ್ಟ ಎಂಬುದನ್ನು ನಾಟಕ ನಿರಂತರವಾಗಿ ನೆನಪಿಸುತ್ತದೆ. ‘‘ಆಫ್ರಿಕಾದ ರಾಜಕೀಯವನ್ನು ನಮ್ಮ ನೆಲಕ್ಕೆ ಅನ್ವಯಿಸಿ ಈ ನಾಟಕ ಸಿದ್ಧಪಡಿಸಲಾಗಿದೆ’’ ಎನ್ನುತ್ತಾರೆ ನಿರ್ದೇಶಕ ಮಹದೇವ ಹಡಪದ್.
ಇಂದಿನ ಭಾರತದಲ್ಲಿ ರಾಷ್ಟ್ರೀಯತೆ, ಧರ್ಮ, ಜಾತಿ, ಭಾಷೆ ಮತ್ತು ಪ್ರಾದೇಶಿಕ ಗುರುತುಗಳ ರಾಜಕೀಯ ತೀವ್ರವಾಗುತ್ತಿರುವ ಹೊತ್ತಿನಲ್ಲಿ, ಈ ನಾಟಕ ಒಂದು ಮುಖ್ಯ ಪ್ರಶ್ನೆ ಕೇಳುತ್ತದೆ. ಬುಡಕಟ್ಟುಗಳು ಕ್ರಿಶ್ಚಿಯನ್ನರಾಗಿ, ಕ್ರಿಶ್ಚಿಯನ್ನರು ‘ಘರ್ ವಾಪ್ಸಿ’ಯಾಗಿ ಹಿಂದುತ್ವ ರಾಷ್ಟ್ರೀಯವಾದಿಗಳಾಗುವ ರಾಜಕೀಯವನ್ನು ಬಹಳ ನವಿರಾಗಿ ನಾಟಕದಲ್ಲಿ ಹೆಣೆಯಲಾಗಿದೆ. ರೆಮಿ ರಾಮನಾಗಿ, ರಾಮ ರೆಮಿಯಾಗಿ ನಂತರ ರಾಷ್ಟ್ರವಾದಿಯಾಗುವ ದುರಂತವೇ ಇದಾಗಿದೆ.
ಧರ್ಮಾಧರಿತ ಸಮಾಜವನ್ನು ನಿರ್ಮಿಸಲು ಹೊರಟ ರಾಮ(ರೆಮಿ) ತನ್ನ ಪತ್ನಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ವಿಫಲನಾಗುತ್ತಾನೆ. ರಾಷ್ಟ್ರವಾದಿಯಾಗುವುದು ಎಂದರೆ ಪತ್ನಿ ಮತ್ತು ವೃದ್ಧ ತಾಯಿಯನ್ನು ವಂಚಿಸುವುದೇ ಆಗಿದೆ. ತನ್ನ ಗೆಳತಿಯ ಜೊತೆ ಎಲ್ಲಾ ಐಶಾರಾಮಿ ಬದುಕು ಬದುಕುವ ರಾಷ್ಟ್ರೀಯವಾದಿ ರಾಮ(ರೆಮಿ) ತಾಯಿಯನ್ನು ಉದ್ದೇಶಿಸಿ ‘‘ಈ ರಾಷ್ಟ್ರಕ್ಕಾಗಿ ನೀನು ಅನಾಥಾಶ್ರಮ ಸೇರಲೂ ಸಿದ್ಧವಾಗಬೇಕು’’ ಎನ್ನುತ್ತಾನೆ. ಅದೇನು ವೈಯಕ್ತಿಕ ಬದುಕಿನ ತ್ಯಾಗವಲ್ಲ. ತಾನು ಎಲ್ಲವನ್ನು ಅನುಭವಿಸುತ್ತಲೇ ರಾಷ್ಟ್ರಸೇವೆಯ ನೆಪದಲ್ಲಿ ಕುಟುಂಬದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಒಂದು ವಂಚನೆಯ ವಿಧಾನವಷ್ಟೇ!
ಬುಡಕಟ್ಟು ಸಮುದಾಯದ ಮಹಿಳೆ ರೇಣುಕಮ್ಮಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಮೇರಿಯಾಗುತ್ತಾಳೆ. ಮಗ ರಾಮನು ರೆಮಿಯಾಗುತ್ತಾನೆ. ಆದರೆ ಮೇರಿಯ ಕುಟುಂಬ ಹಿಂದೂ ಧರ್ಮದ ಆಚರಣೆ ಮಾಡಬೇಕೋ ಕ್ರಿಶ್ಚಿಯನ್ ಧರ್ಮದ ಆಚರಣೆ ಮಾಡಬೇಕೋ ಎಂದು ಹಲವು ಬಾರಿ ಗೊಂದಲಕ್ಕೀಡಾಗುತ್ತದೆೆ. ನಿಧಾನಕ್ಕೆ ರೆಮಿ ರಾಷ್ಟ್ರವಾದಿಯಾಗಿ ರಾಮನಾಗುತ್ತಾನೆ. ರಾಮನ ಮಾತು ಕೇಳಿ ಊರ ಜನ ರಾಷ್ಟ್ರವಾದಿಯೊಬ್ಬನನ್ನು ಚುನಾವಣೆಯಲ್ಲಿ ಆಯ್ಕೆ ಮಾಡುತ್ತಾರೆ. ರಾಮ ಪ್ರೀತಿಸಿದ ಹುಡುಗಿಯನ್ನು ರಾಮನ ಅಣ್ಣ ವಿವಾಹವಾಗುತ್ತಾನೆ. ವಿವಾಹದ ಬಳಿಕ ಅಣ್ಣ ನಿಧನ ಹೊಂದುತ್ತಾನೆ. ಬುಡಕಟ್ಟು ನಿಯಮಗಳ ಪ್ರಕಾರ ಅಣ್ಣ ತೀರಿ ಹೋದರೆ ಅತ್ತಿಗೆಯನ್ನು ತಮ್ಮ ವಿವಾಹವಾಗಬೇಕು. ಇದನ್ನು ವಿರೋಧಿಸಿ ರಾಮ ಹಳ್ಳಿ ತೊರೆದು ನಗರ ಸೇರಿ ಮತ್ತೆ ರೆಮಿಯಾಗಿ ರಾಷ್ಟ್ರವಾದಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾನೆ. ಹೀಗೆ ಕತೆ ಸಾಗುತ್ತಾ ರಾಷ್ಟ್ರವಾದಿಯ ಸೋಗಲಾಡಿತನವನ್ನು ಬಯಲು ಮಾಡುತ್ತಾ ಹೋಗುತ್ತದೆ.
ಧರ್ಮ ಮತ್ತು ರಾಜಕೀಯದ ಸಂಬಂಧವನ್ನೂ ನಾಟಕ ಪ್ರಶ್ನಿಸುತ್ತದೆ. ಧರ್ಮವು ಕರುಣೆ ಮತ್ತು ಪ್ರೀತಿಯ ಪದಗಳನ್ನು ಬಳಸಿಯೇ ಕ್ರೂರತನವನ್ನು ಜಾರಿ ಮಾಡುತ್ತದೆ. ಮೇರಿಯ ಕುಟಂಬದ ಜೊತೆ ಫಾದರಪ್ಪ ಮತ್ತು ಪೂಜಾರಪ್ಪರಿಬ್ಬರೂ ಪ್ರೀತಿ, ರಕ್ಷಣೆಯ ಹೆಸರಿನಲ್ಲೇ ಕ್ರೂರತೆಯನ್ನೇ ಸಾಧಿಸುತ್ತಾರೆ. ರಾಮನ ರಾಷ್ಟ್ರೀಯವಾದಿ ರಾಜಕೀಯವು ಕೂಡಾ ಕರ್ಮಠ ಸಿದ್ಧಾಂತದ ಭಾಷೆಯನ್ನು ಮಾತನಾಡುತ್ತದೆ. ಈ ಎರಡರ ನಡುವಿನ ಸಂಘರ್ಷದಲ್ಲಿ ಕೊನೆಗೆ ಬಲಿಯಾಗುವುದು ಮಹಿಳೆ. ಇಂದಿನ ಭಾರತದಲ್ಲಿ ಧಾರ್ಮಿಕ ಧ್ರುವೀಕರಣ ಮತ್ತು ಚುನಾವಣಾ ರಾಜಕೀಯದ ಬೆಳವಣಿಗೆಯನ್ನು ಗಮನಿಸಿದರೆ, ಈ ದೃಶ್ಯಗಳು ಇನ್ನಷ್ಟು ಪ್ರಸ್ತುತವೆನಿಸುತ್ತವೆ.
‘ತಾರಾ’ಳ ಪಾತ್ರ ನಾಟಕದ ಕೇಂದ್ರ ಬಿಂದುವಾಗಿದೆ. ಆಕೆ ಕೇವಲ ರಾಮ(ರೆಮಿ)ನ ಪತ್ನಿಯಲ್ಲ. ಪ್ರೀತಿ, ನಿಷ್ಠೆ ಮತ್ತು ಮನುಷ್ಯತ್ವದ ಸಂಕೇತವಾಗಿ ಕಾಣುತ್ತಾಳೆ. ತಾರಾ ಪಾತ್ರಧಾರಿಯ ನಟನೆ ನಮ್ಮ ಕಣ್ಣಾಲಿಗಳನ್ನು ಒದ್ದೆ ಮಾಡದೇ ಬಿಡುವುದಿಲ್ಲ. ರಾಜಕೀಯವು ಪ್ರೀತಿಯನ್ನು ಸೋಲಿಸಿದಾಗ ಸಮಾಜವೂ ಸೋಲುತ್ತದೆ ಎಂಬ ಸಂದೇಶವನ್ನು ಆಕೆಯ ದುರಂತ ಅಂತ್ಯವು ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುತ್ತದೆ.
ಮಹದೇವ ಹಡಪದ್ ಅವರ ನಿರ್ದೇಶನದಲ್ಲಿ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಜುಲೈ 19ರಂದು ಈ ನಾಟಕ ಚೊಚ್ಚಲ ಪ್ರದರ್ಶನ ಕಂಡಿತ್ತು. ಆದರೆ ಕಲಾವಿದರು ಇದು ಮೊದಲ ಪ್ರದರ್ಶನ ಎಂಬಂತೆ ನಟಿಸಲಿಲ್ಲ. ರಾಮ, ಮೇರಿ, ಫಾದರಪ್ಪ, ಪೂಜಾರಪ್ಪ ಸೇರಿದಂತೆ ಎಲ್ಲರ ನಟನೆಯೂ ಅತ್ಯದ್ಭುತವಾಗಿತ್ತು. ತಾರಾ ಪಾತ್ರಧಾರಿಯ ನಟನೆಯಂತೂ ಒಂದೆರಡು ದಿನ ನಮ್ಮನ್ನು ಕಾಡದೇ ಇರದು.
ರಂಗಸಜ್ಜೆ, ಸಂಭಾಷಣೆ, ಮ್ಯೂಸಿಕ್ ಮತ್ತು ಅಭಿನಯ ನಾಟಕದ ವಿಚಾರವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುತ್ತವೆ. ಯಾವುದೇ ಅತಿಯಾದ ಭಾವೋದ್ರೇಕಕ್ಕೆ ಜಾರದೆ, ಚಿಂತನೆಗೆ ಪ್ರೇರೇಪಿಸುವ ಶೈಲಿಯಲ್ಲಿ ನಾಟಕ ಸಾಗುತ್ತದೆ. ವಿಶೇಷವಾಗಿ ತಾರಾಳ ಅಂತ್ಯದ ಕೊನೆಯ ದೃಶ್ಯ ಪ್ರೇಕ್ಷಕರನ್ನು ಮೌನಕ್ಕೆ ದೂಡುತ್ತದೆ.
‘ಮಣ್ಣಿನ ಮಗ ಅರ್ಥಾತ್ ರಾಷ್ಟ್ರೀಯ ಸನ್ಯಾಸಿ’ ಕೇವಲ ಒಂದು ನಾಟಕವಲ್ಲ. ನಮ್ಮ ಕಾಲದ ರಾಜಕೀಯದ ಕನ್ನಡಿಯಾಗಿದೆ. ತತ್ವಗಳು, ರಾಷ್ಟ್ರ, ಧರ್ಮ, ಜಾತಿ, ಅಭಿವೃದ್ಧಿ, ಕ್ರಾಂತಿ ಇವೆಲ್ಲದರ ನಡುವೆ ಮನುಷ್ಯನ ಸ್ಥಾನ ಎಲ್ಲಿದೆ ಎಂಬ ಪ್ರಶ್ನೆಯನ್ನು ಅದು ಪ್ರೇಕ್ಷಕರ ಮುಂದಿಡುತ್ತದೆ. ಇಂದಿನ ರಾಜಕೀಯ ವಾತಾವರಣದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವಾಗ, ಈ ನಾಟಕ ಯಾವುದೇ ಸಿದ್ಧಾಂತವನ್ನು ಹೊಗಳುವುದಿಲ್ಲ ಅಥವಾ ಖಂಡಿಸುವುದಿಲ್ಲ. ಬದಲಾಗಿ ಪ್ರತಿಯೊಂದು ಸಿದ್ಧಾಂತವನ್ನೂ ಮನುಷ್ಯತ್ವದ ಮಾನದಂಡದಲ್ಲಿ ಅಳೆಯುವಂತೆ ಒತ್ತಾಯಿಸುತ್ತದೆ.
ಆ ಕಾರಣಕ್ಕೇ ಈ ನಾಟಕ ಇಂದಿಗೂ ಪ್ರಸ್ತುತವಾಗಿದೆ. ನ್ಗುಗಿ ವಾ ಥಿಯೊಂಗೊ ಆಫ್ರಿಕಾವನ್ನು ಬರೆಯುತ್ತಿದ್ದರೂ, ಅವರು ಬರೆದಿರುವುದು ಅಂತಿಮವಾಗಿ ಎಲ್ಲ ಸಮಾಜಗಳ ಮನುಷ್ಯನ ಕಥೆ ಎಂಬುದನ್ನು ಈ ಕನ್ನಡ ರೂಪಾಂತರ ನಾಟಕ ಸಾಬೀತುಪಡಿಸುತ್ತದೆ.