Photo: TOI



ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 16ರಂದು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು, ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಸೂದೆಯ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕೆಂದು ಆಗ್ರಹಿಸಿದ್ದರು. ಜೊತೆಗೆ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆದ ಸಂಸತ್ತಿನ ಮಳೆಗಾಲದ ಅಧಿವೇಶನವು, 64 ದಿನಗಳಾದ ಬಳಿಕವೂ ಅಧಿಕೃತವಾಗಿ ಮುಕ್ತಾಯ ಆಗಿಲ್ಲ ಎಂದು ಎಚ್ಚರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಮುಂದೂಡಿಕೆ ಆಗಿರುವ ಸಂಸತ್ತಿನ ಅಧಿವೇಶನವನ್ನು ಮುಕ್ತಾಯಗೊಳಿಸುವುದು ಸಾಂವಿಧಾನಿಕ ಆವಶ್ಯಕತೆ ಅಲ್ಲ. ಈ ಹಿಂದೆ ಕೂಡ ಅದಕ್ಕಿಂತ ಹೆಚ್ಚು ಅವಧಿಗೆ ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆದ ನಿದರ್ಶನಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ; ಜೊತೆಗೆ, ಡಿಲಿಮಿಟೇಷನ್ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಮತ್ತೆಮತ್ತೆ ಮಾತುಕತೆಗೆ ಒತ್ತಾಯಿಸುತ್ತಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರಲ್ಲದೆ, ಈ ವಿಚಾರಗಳನ್ನು ಸಂಸತ್ತಿನಲ್ಲೇ ಅರ್ಥಪೂರ್ಣವಾಗಿ ಚರ್ಚೆ ಮಾಡಬೇಕೆಂದು ಬಯಸಿದ್ದಾರೆ. ಅಂದರೆ, ಮತ್ತೆ ಸರ್ವಪಕ್ಷ ಮಾತುಕತೆಗಳ ಸಾಧ್ಯತೆಗೆ ಬಾಗಿಲು ಮುಚ್ಚಿದ್ದಾರೆ.

ಇಲ್ಲಿ ಸರಕಾರದ ಒಂದು ದ್ವಂದ್ವ ಗಮನ ಸೆಳೆಯುತ್ತದೆ. ತನಗೆ ಅನುಕೂಲ ಆಗುವುದಾದರೆ ಸಂವಿಧಾನವನ್ನು ಮುಂದಿಟ್ಟು ಮಾತನಾಡುವ ಸರಕಾರ, ತನಗೆ ಅನುಕೂಲ ಇಲ್ಲದಾಗ ಸಂವಿಧಾನದ ಪ್ರಶ್ನೆ ಎತ್ತುವುದಿಲ್ಲ. ಸಂವಿಧಾನವನ್ನು ತನ್ನ ನಡೆ-ನುಡಿಗಳಿಗೆ ಚೌಕಟ್ಟಾಗಿ ಇಟ್ಟುಕೊಂಡು ವ್ಯವಹರಿಸುವ ಬದಲು, ತನ್ನ ರಾಜಕೀಯ ದಾಳಗಳಿಗೊಂದು ಟೂಲ್ ಆಗಿ ಬಳಸಿಕೊಳ್ಳುವುದು ಸರಕಾರಕ್ಕೆ ಚಟ ಆಗಿಬಿಟ್ಟಿದೆ.

ಡಿಲಿಮಿಟೇಷನ್ ಪ್ರಕ್ರಿಯೆ ಸಂವಿಧಾನದ 82 ಮತ್ತು 170ನೇ ವಿಧಿಗಳಿಗೆ ಅನುಸಾರವಾಗಿ ನಡೆಯಬೇಕಾಗಿರುವ ಪ್ರಕ್ರಿಯೆ. ಆ ಪ್ರಕ್ರಿಯೆಯ ತಳಪಾಯವೇ ಜನಗಣತಿ. ಪ್ರತಿಯೊಂದು ಮತಕ್ಕೂ ಸಮಾನ ಮೌಲ್ಯ ಒದಗಿಸುವುದಕ್ಕಾಗಿ, ಬದಲಾಗಿರುವ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಪ್ರಕ್ರಿಯೆ ಇದು.

ದುರದೃಷ್ಟವಶಾತ್, ಹಾಲಿ ಸರಕಾರ ಪ್ರತೀ 10 ವರ್ಷಗಳಿಗೊಮ್ಮೆ ನಡೆಯಬೇಕಾಗಿರುವ ಜನಗಣತಿಯನ್ನು ಕಳೆದ 16 ವರ್ಷಗಳಿಂದ ನನೆಗುದಿಗೆ ಹಾಕಿ ಕುಳಿತಿದೆ. ಕೇಳಿದರೆ, ಸಂವಿಧಾನದಲ್ಲಿ ಅದು ಕಡ್ಡಾಯ ಎಂದು ಹೇಳಿಲ್ಲ ಎಂಬ ಉತ್ತರ ಬರುತ್ತಿದೆ. ಸಾಂವಿಧಾನಿಕವಾಗಿ, 2026ರ ಬಳಿಕದ ಮೊದಲ ಜನಗಣತಿಯ ತನಕ 1971ರ ಜನಗಣತಿಯೇ ಡಿಲಿಮಿಟೇಷನ್‌ಗೆ ಆಧಾರ. ಹಾಲಿ ಡಿಲಿಮಿಟೇಷನ್ ಮಸೂದೆಯು ಈ ಪ್ರಕ್ರಿಯೆ, 2011ರ ಜನಗಣತಿ ಆಧರಿಸಿ ನಡೆಸಬೇಕೆಂದು ಬಯಸುತ್ತಿದೆ.

2011ರ ಜನಗಣತಿಯ ಫಲಿತಾಂಶಗಳು ಈಗ ವಾಯ್ದೆ ತೀರಿರುವ ಫಲಿತಾಂಶಗಳು. ಅದನ್ನೇ ಹಿಡಿದು ನೇತಾಡುವುದರ ಹಿಂದೆ, ಸರಕಾರಕ್ಕೆ ತನ್ನದೇ ಹಿತಾಸಕ್ತಿಗಳು ಇರುವಂತಿದೆ. ಸರಕಾರದ ಈ ನಿಲುವು ತಪ್ಪೆಂಬುದನ್ನು ಈಗ ಚುನಾವಣಾ ಆಯೋಗದ ಚಿತಾವಣೆಯಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆ ಕೂಡ ಸಾಬೀತುಪಡಿಸುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ, ಮತದಾರರ ಕರಡು ಪಟ್ಟಿಯಿಂದ 13 ಕೋಟಿ ಮತದಾರರ ಹೆಸರುಗಳನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದರೆ, ದೇಶದ ಮತದಾರರ ಸಂಖ್ಯೆಯ ಅಂದಾಜು ಶೇ. 15.7 ಭಾಗ ಈ ಕ್ಷಣಕ್ಕೆ ಕಡಿಮೆ ಆಗಿದೆ. ಡಿಲಿಮಿಟೇಷನ್ ಪ್ರಕ್ರಿಯೆ ಆರಂಭಿಸಲು ಇದು ಸಕಾಲ ಅಲ್ಲ ಎಂದು ಹೇಳುವುದಕ್ಕೆ ಈ ಒಂದೇ ಕಾರಣ ಸಾಕು. ದೇಶದ ಮತದಾರರ ಸಂಖ್ಯೆಯೇ ಸ್ಪಷ್ಟ ಇಲ್ಲದಿರುವಾಗ, ಸರಕಾರಕ್ಕೆ ಮತದಾರರ ಸಂಖ್ಯೆಯನ್ನೇ ಆಧಾರವಾಗಿರಿಸಿಕೊಂಡು ನಡೆಯಬೇಕಾಗಿರುವ ಡಿಲಿಮಿಟೇಷನ್ ಪ್ರಕ್ರಿಯೆಯನ್ನು ನಡೆಸುವ ತುರ್ತು ಯಾಕೆ? ಆ ಪ್ರಕ್ರಿಯೆಯನ್ನು ಈಗ ನಡೆಯಬೇಕೆಂದು ಹಠ ಹಿಡಿಯುವ ಯಾವುದೇ ನೈತಿಕತೆ ಸರಕಾರಕ್ಕೆ ಉಳಿದಿಲ್ಲ. ಮೊದಲು ಜನಗಣತಿ ಮುಗಿಸಿ, ಎಸ್‌ಐಆರ್ ಪ್ರಕ್ರಿಯೆ ಪೂರೈಸಿ, ಆ ಬಳಿಕ ಡಿಲಿಮಿಟೇಷನ್ ನಡೆಯಲಿ.

ಸರಕಾರಕ್ಕೆ ಡಿಲಿಮಿಟೇಷನ್ ಪ್ರಕ್ರಿಯೆ ಆರಂಭಿಸುವ ಹಠ ಇದೆ ಎಂಬುದು ಸ್ಪಷ್ಟ. ಏಕೆಂದರೆ, ಅದು ಈಗಾಗಲೇ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತ ಇಲ್ಲದೇ ಬಿದ್ದುಹೋಗಿರುವ ಸಂವಿಧಾನ ತಿದ್ದುಪಡಿ ಮಸೂದೆ. ಸಂವಿಧಾನದ 131ನೇ ತಿದ್ದುಪಡಿಯಾಗಿ ಎಪ್ರಿಲ್ 16ರಂದು ಲೋಕಸಭೆಯಲ್ಲಿ ಮಂಡಿತವಾದ ಈ ಮಸೂದೆ, ಎಪ್ರಿಲ್ 17ರಂದು ಸೋಲು ಕಂಡಿದೆ. ಈಗ ಮತ್ತೆ ಪ್ರತಿಪಕ್ಷಗಳ ಸಹಾಯ ಯಾಚಿಸುವಾಗಲೂ ಸರಕಾರ ತನ್ನದೇನೂ ತಪ್ಪಿಲ್ಲ, ಪ್ರತಿಪಕ್ಷಗಳದ್ದೇ ಎಲ್ಲ ತಪ್ಪು; ಸಂಸದೀಯ ಕಲಾಪಗಳಿಗೆ ಅವರದೇ ಅಡ್ಡಿ ಎಂಬಂತೆ ಬಿಂಬಿಸುತ್ತಿರುವುದು ತಮಾಷೆಯಾಗಿದೆ.

ಸರಕಾರದ ಈ ಬೇಜವಾಬ್ದಾರಿತನಗಳ ಕಾರಣದಿಂದಾಗಿ, ಲೋಕಸಭೆಯಲ್ಲಿ ಮೂರನೇ ಒಂದು ಭಾಗ ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡುವ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆಗೆ ತನ್ನಿಂತಾನೆ ಅಡ್ಡಿ ಆಗಿದೆ. ಕಾಯ್ದೆ ಜಾರಿಗೆ ಬಂದ ಬಳಿಕ ನಡೆಯುವ ಮೊದಲ ಜನಗಣತಿ ಆಧರಿಸಿ, ಈ ಮಹಿಳಾ ಮೀಸಲು ಕಾಯ್ದೆ ಜಾರಿಗೆ ಬರಬೇಕಿತ್ತು. ಸದ್ಯದ ಸನ್ನಿವೇಶದಲ್ಲಿ ಇದು 2029ರ ಚುನಾವಣೆಗಳಿಗೂ ಅನ್ವಯ ಆಗುವುದಿಲ್ಲ. ಈ ಕಾಯ್ದೆ ಕೇವಲ ಮಹಿಳೆಯರ ಮುಂಗೈಗೆ ಹಚ್ಚಿದ ಬೆಲ್ಲವಾಗಿ ಉಳಿಯಲಿದೆ.

ಈ ಎಲ್ಲ ಚುಕ್ಕಿಗಳನ್ನು ಒಟ್ಟು ಸೇರಿಸಿ ನೋಡಿದಾಗ ಸಿಗುವ ಚಿತ್ರ: ಹಾಲಿ ಭಾರತ ಸರಕಾರಕ್ಕೆ ತನ್ನ ಸ್ವಂತ ಅಜೆಂಡಾಗಳ ಜಾರಿಗೆ ಒದ್ದಾಡುವುದು ಬಿಟ್ಟರೆ, ದೇಶದ ಜನತೆಯ ಆಶೋತ್ತರಗಳಿಗೆ ಧ್ವನಿಯಾಗುವ ಯಾವುದೇ ಇರಾದೆಯಾಗಲೀ ನೈತಿಕತೆಯಾಗಲೀ ಉಳಿದಿರುವಂತಿಲ್ಲ. ಪ್ರತಿಯೊಂದು ಸಂಗತಿಗಳಲ್ಲೂ ತಳಪಾಯ ಇಲ್ಲದ ಮಹಾಸೌಧಗಳನ್ನು ನಿರ್ಮಿಸುವುದು ಮತ್ತು ಅವು ಕುಸಿದು ಬೀಳುವುದನ್ನು ಆನಂದಿಸುವುದು ಈ ಅಧಿಕಾರಸ್ಥರಿಗೆ ಚಟ ಆಗಿಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor