ರಾಷ್ಟ್ರಧ್ವಜದ ಮೇಲೂ ಮೋದಿ ಸರಕಾರದ ಕೆಂಗಣ್ಣೇ?
ತ್ರಿವರ್ಣ ಧ್ವಜ ಹಾರಿಸಲು ಹೋದವರನ್ನು ಬಂಧಿಸಿದ ಮೋದಿ ಸರಕಾರ, ಅವರು ಭಗವಾ ಧ್ವಜ ಹಿಡಿಯಲಿ ಎಂದು ಬಯಸುತ್ತಿದೆಯೆ? ಈ ದೇಶದ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಗೌರವವೇ ಇಲ್ಲದ ಆರೆಸ್ಸೆಸ್ ಮತ್ತು ಬಿಜೆಪಿಯ ಇತಿಹಾಸವನ್ನು ನೋಡಿದರೆ ಈ ಅನುಮಾನ ಏಳದೇ ಇರುವುದಿಲ್ಲ. ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರ ಮಾತ್ರವಾಗಿ ಝಳಪಿಸುವಷ್ಟಕ್ಕೇ ಬಿಜೆಪಿಯ ‘ದೇಶಭಕ್ತಿ’ ಸೀಮಿತವಾಗಿರುವುದು ಇಷ್ಟು ವರ್ಷಗಳಲ್ಲಿ ಮತ್ತೆ ಮತ್ತೆ ಕಂಡಿದೆ. ತನ್ನ ವಿರುದ್ಧ ಧ್ವನಿಯೆತ್ತುವವರನ್ನು, ಪ್ರಶ್ನಿಸುವವರನ್ನು, ತನ್ನ ಹುಳುಕು ಬಯಲಿಗೆಳೆಯುವವರನ್ನು ಪಾಕಿಸ್ತಾನಿಗಳು ಎಂದುಬಿಡುವ ಈ ಸರಕಾರ, ಈಗ ತ್ರಿವರ್ಣ ಧ್ವಜ ಹಾರಿಸಲು ಬಿಡದೆ ಜನರನ್ನು ಜೈಲಿನಲ್ಲಿ ಕೂಡಿಹಾಕಿದ ತನ್ನ ನಡವಳಿಕೆಯನ್ನು ಏನೆಂದು ಕರೆದುಕೊಳ್ಳುತ್ತದೆ?
ಗೊತ್ತಿರುವ ಹಾಗೆ, ಸಂಘಿಗಳು ಈ ದೇಶಕ್ಕೆ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಒಪ್ಪಿಕೊಂಡವರಲ್ಲ. ಬದಲಾಗಿ ಮನುಸ್ಮತಿಯನ್ನು ಕೊಂಡಾಡುವವರು. ಮನುಸ್ಮತಿಯ ಮಾತುಗಳೇ ಕಾನೂನು ಎಂದಿದ್ದವರು. ತ್ರಿವರ್ಣ ಧ್ವಜವನ್ನು 52 ವರ್ಷಗಳ ಕಾಲ ಹಾರಿಸದೇ ಇದ್ದ ಆರೆಸ್ಸೆಸ್ಗೆ ಅದನ್ನು ಮಾಡಲು ಸುಪ್ರೀಂ ಕೋರ್ಟ್ ಆದೇಶ ಕೊಡಬೇಕಾಯಿತು. ಅದೇ ಆರೆಸ್ಸೆಸ್ನ ಭಯ್ಯಾಜಿ ಜೋಶಿ 2016ರಲ್ಲಿ ಭಗವಾ ಧ್ವಜವನ್ನು ರಾಷ್ಟ್ರಧ್ವಜ ಎಂದು ಪರಿಗಣಿಸುವುದರಲ್ಲಿ ತಪ್ಪಿಲ್ಲ ಎಂದಿದ್ದರು. ಆನಂತರ ಆರೆಸ್ಸೆಸ್ ಏನು ಸ್ಪಷ್ಟೀಕರಣ ಕೊಟ್ಟಿತು ಎಂಬುದಕ್ಕಿಂತಲೂ, ಅದರ ಮನಸ್ಥಿತಿ ಏನಿದೆ ಎಂಬುದನ್ನು ಆ ಮಾತು ಸೂಚಿಸಿತ್ತು. ಅದೇ ಭಯ್ಯಾಜಿಯೇ, ವಂದೇ ಮಾತರಂ ನಮ್ಮ ನಿಜವಾದ ರಾಷ್ಟ್ರಗೀತೆ, ಜನಗಣಮನ ಸಂವಿಧಾನದ ಮೂಲಕ ರಾಷ್ಟ್ರಗೀತೆಯಾಗಿದೆ ಎಂದಿದ್ದರಲ್ಲಿ ಕೂಡ ‘ಸಂಘಿ ಇಂಗಿತ’ ಸ್ಪಷ್ಟವಿತ್ತು. ಅದರದ್ದೇ ಮತ್ತೊಂದು ಕವಲೆಂಬಂತೆ, ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ಕಡ್ಡಾಯವಾಗಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಬೇಕೆಂಬ ಆದೇಶವನ್ನು ಈಚೆಗೆ ಕೇಂದ್ರ ಸರಕಾರ ಹೊರಡಿಸಿತು. 2024ರ ಲೋಕಸಭೆ ಚುನಾವಣೆಯ ಹೊತ್ತಲ್ಲಿ ಚಾರ್ ಸೌ ಪಾರ್ ಎಂಬ ಘೋಷಣೆಯೊಂದಿಗೆ ಹೊರಟಾಗ ಬಿಜೆಪಿಗೆ ಸಂವಿಧಾನ ಬದಲಿಸುವ ಉದ್ದೇಶವಿತ್ತೆಂಬುದನ್ನು ಒಳಗಿನವರೇ ಹೇಳಿಕೊಂಡಿದ್ದರು. ಕಳೆದ ವರ್ಷ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ಮೋದಿ ಪಕ್ಕಾ ಪ್ರಚಾರಕನಂತೆ ಆರೆಸ್ಸೆಸ್ ಗುಣಗಾನ ಮಾಡಿದಾಗ, ಈ ದೇಶದ ಸ್ವಾತಂತ್ರ್ಯ, ಪ್ರಜಾಸತ್ತೆ ನಾಗಪುರದ ಚಾವಡಿಯಲ್ಲಿ ಬಿದ್ದು ಹೊರಳಾಡಿದಂತೆ ಕಂಡಿತ್ತು.
ರಾಷ್ಟ್ರೀಯ ಆಶಯಗಳು ಎನ್ನಲಾಗುವ ಯಾವುದರ ಬಗ್ಗೆಯೂ ಮೋದಿ ಸರಕಾರಕ್ಕೆ ಕಳಕಳಿಯಿಲ್ಲ ಎನ್ನುತ್ತಿರುವುದು ಸ್ಪಷ್ಟವಾಗುತ್ತಿದೆ. ವಿಪರ್ಯಾಸವೆಂದರೆ, ತನ್ನ ವಿರೋಧಿಗಳ ವಿರುದ್ಧ ಅಸ್ತ್ರವಾಗಿ ಅದೇ ಆಶಯಗಳನ್ನು ಅದು ಪ್ರಯೋಗಿಸುತ್ತದೆ. ಜನಹಿತವನ್ನು ಕಡೆಗಣಿಸಿ ತನ್ನ ದುರುದ್ದೇಶ ಪೂರೈಸಲು ಅವನ್ನು ಬಳಸಿಕೊಳ್ಳುತ್ತದೆ. ವಿರೋಧಿಗಳನ್ನು ಜೈಲಿಗಟ್ಟುವುದಕ್ಕೂ ಅದನ್ನೇ ಬಳಸುತ್ತದೆ. ಪ್ರಶ್ನಿಸಿದರೆ ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯ ಗೌರವ ಎಂಬ ಬ್ರಹ್ಮಾಸ್ತ್ರ ತೆಗೆಯುತ್ತದೆ. ಮೊನ್ನೆ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿದ ನಂತರ ಅಲ್ಲಿ ಹೋಗಿ ತ್ರಿವರ್ಣ ಧ್ವಜ ಹಾರಿಸಿದ ಸಿಜೆಪಿ ನಾಯಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅವರ ಬಂಧನ ವಿರೋಧಿಸಿ, ಸಿಜೆಪಿ ಮತ್ತು ಎಐಎಸ್ಎ ತ್ರಿವರ್ಣ ಧ್ವಜ ಹಾರಿಸುವ ಪ್ರತಿಭಟನೆಗೆ ಮುಂದಾದಾಗಲೂ ತಡೆಯಲಾಯಿತು. ರಾಷ್ಟ್ರಧ್ವಜ ಹಿಡಿದವರನ್ನು ಪೊಲೀಸರು ಎಳೆದೊಯ್ಯುತ್ತಾರೆಂದರೆ, ಇದು ಬ್ರಿಟಿಷರ ದಮನ ನೀತಿಗಿಂತ ಭಿನ್ನವಲ್ಲ. ಘರ್ ಘರ್ ತಿರಂಗಾ ಎಂದು ರಾಜಕೀಯ ಮಾಡುವ ಸರಕಾರ, ಈಗ ಜನರು ತ್ರಿವರ್ಣ ಧ್ವಜ ಹಿಡಿಯುವ ಮೂಲಕವೇ ಪ್ರತಿಭಟನೆಯ ಹೊಸ ಪರಿಭಾಷೆಯನ್ನು ಕಂಡುಕೊಂಡಾಗ ಅಕ್ಷರಶಃ ಬೆಚ್ಚಿಬಿದ್ದಿದೆ. ತಾನು ವಿರೋಧಿಗಳ ಮೇಲೆ ಹೂಡುವ ಅಸ್ತ್ರವನ್ನೇ ಪ್ರತಿಭಟನಾಕಾರರು ಪ್ರಜಾಸತ್ತಾತ್ಮಕ ಸಾಧನವಾಗಿಸಿಕೊಂಡಿದ್ದು ಸರಕಾರಕ್ಕೆ ಅನಿರೀಕ್ಷಿತ ಆಘಾತದಂತಿದೆ ಎಂಬುದು ಸತ್ಯ.
ಇತ್ತೀಚೆಗೆ ಸರಕಾರ ಇಂಥ ಪ್ರತ್ಯಸ್ತ್ರಗಳ ಸಾಲುಗಳನ್ನೇ ನೋಡುತ್ತ ಕಂಗೆಟ್ಟಿದೆ. ಯುವಜನರನ್ನು ಜಿರಳೆಗಳು ಎಂದಿದ್ದಕ್ಕೆ ಸಿಜೆಪಿ ಅವತರಿಸಿ ಎಲ್ಲ ಜಿರಳೆಗಳನ್ನು ಒಟ್ಟುಗೂಡಿಸಿತು. ಅದರ ನಂತರ ಈ ಸರಕಾರದ ನಿದ್ದೆಯೇ ಹಾರಿಹೋಗಿದೆ. ಪ್ರತಿಭಟನೆಗಳ ದಮನಕ್ಕೆ ಪೊಲೀಸರನ್ನು, ಅರೆಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ. ಅವರ ನಡುವೆಯೇ ಬಲಪಂಥೀಯ ಗೂಂಡಾಗಳು ನುಸುಳಲು ಬಿಟ್ಟು ದಾಳಿ ಮಾಡಿಸುತ್ತಿರುವುದಂತೂ ಸರಕಾರದ ಹತಾಶೆಯ ಪ್ರತಿರೂಪವಾಗಿದೆ. ಪ್ರತಿಭಟಿಸುವವರ ಪ್ರಶ್ನೆ ಇರುವುದು ಜ್ಞಾನೇಶ್ ಕುಮಾರ್ ವಿರುದ್ಧ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ನಿಂತಿರುವುದು ಮೋದಿ ಸರಕಾರ. ಈಗಿನೆಲ್ಲ ಬೆಳವಣಿಗೆಗಳು ಅದರ ಪಾಲಿಗೆ ತಲ್ಲಣ, ತಳಮಳಗಳ ಕುರುಕ್ಷೇತ್ರ.
ಈ ಸರಕಾರ ತನ್ನ ಕ್ರಮಗಳ ಮೂಲಕ ದೇಶದ ಯುವಕರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರೊಬ್ಬರ ವರದಿ ಸಿಜೆಪಿ ಪ್ರತಿಭಟನೆಯನ್ನು ಉಲ್ಲೇಖಿಸಿದ್ದು, ಪ್ರತೀಕಾರ ಅಥವಾ ಕಳಂಕ ಎದುರಿಸುತ್ತಿರುವುದಾಗಿ ಯುವಕರು ಹೇಳುತ್ತಿರುವುದನ್ನು ಪ್ರಸ್ತಾಪಿಸಿದೆ. ಇದನ್ನು ಆಧಾರರಹಿತ ಎಂದು ತಳ್ಳಿಹಾಕಿರುವ ಭಾರತ ನಿಯೋಗದ ಶಾಶ್ವತ ಕಾರ್ಯದರ್ಶಿ, ಶಾಂತಿಯುತ ಪ್ರತಿಭಟನೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಇದೆಯೆಂದು ಕಂಠಪಾಠ ಒಪ್ಪಿಸಿದ್ದಾರೆ. ಇವನ್ನೆಲ್ಲ ರಕ್ಷಿಸಲು ಸ್ವತಂತ್ರ ನ್ಯಾಯಾಂಗ, ಮುಕ್ತ ಪತ್ರಿಕೋದ್ಯಮ ಇದೆ ಎಂದಿದ್ದಾರೆ. ಶ್ವೇತಭವನದಲ್ಲಿ ನಿಂತು ಸ್ವತಃ ಮೋದಿ ಅಂಥದೇ ಪುಕ್ಕಟೆ ಮುತ್ತುದುರಿಸುವಾಗ, ಅಧಿಕಾರಿಯೊಬ್ಬರು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹೇಗೆ ಹೇಳದಿರುತ್ತಾರೆ? ಅಲ್ಲಿ ಅವರು ಹೀಗೆಲ್ಲ ಸಮರ್ಥಿಸಿಕೊಳ್ಳುತ್ತ, ಸರಕಾರದ ಮೇಲಿನ ಆರೋಪವನ್ನು ನಿರಾಕರಿಸುವಾಗಲೇ ಇಲ್ಲಿ ಶಾಂತಿಯುತ ಪ್ರತಿಭಟನಾಕಾರರನ್ನು, ಅದೂ ರಾಷ್ಟ್ರಧ್ವಜ ಹಿಡಿದವರನ್ನು ಪೊಲೀಸರು ಬಲವಂತದಿಂದ ವ್ಯಾನಿಗೆ ತುಂಬುತ್ತಿದ್ದರು. ಪ್ರಶ್ನೆ ಮಾಡಿದ್ದಕ್ಕೆ ನ್ಯಾಯದ ಬೇಡಿಕೆಗೆ ಪ್ರತಿಯಾಗಿ ದಬ್ಬಾಳಿಕೆ, ಜೈಲು ಈ ದೇಶದಲ್ಲಿ ಕಟು ವಾಸ್ತವ.
ತ್ರಿವರ್ಣ ಧ್ವಜ ಹಾರಿಸುವ ಪ್ರತಿಭಟನಾ ಮೆರವಣಿಗೆಗೂ ಮೊದಲೇ ವಶಕ್ಕೆ ಪಡೆಯಲಾಗಿದ್ದ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರನ್ನು ರಾತ್ರಿಯಿಡೀ ಜೈಲಿನಲ್ಲಿಟ್ಟು ಬೆಳಗ್ಗೆ ಬಿಡುಗಡೆ ಮಾಡಿರುವುದು, ಕಾನೂನನ್ನು ಗಾಳಿಗೆ ತೂರಲಾಗಿರುವುದು ಚರ್ಚೆಯಾಗುತ್ತಿದೆ. ಬಂಧಿಸಲಾಗಿದ್ದ ಅಭಿಜೀತ್ ದೀಪ್ಕೆಗೆ ಶಾಂತಿಪಾಲನೆ ಮುಚ್ಚಳಿಕೆ ಬರೆದುಕೊಡಲು ಕೇಳಲಾಗಿರುವ ಸುದ್ದಿಯಿದೆ. ಮತ್ತೊಂದೆಡೆ, ಸರಕಾರ ಬದಲಿಸಲು ಕಾಂಗ್ರೆಸ್ ಯತ್ನಿಸುತ್ತಿರುವುದಾಗಿ ಬಿಜೆಪಿಗರು ಭೀತಿಯಿಂದ ಬೊಬ್ಬೆ ಹೊಡೆಯುತ್ತಿದ್ದಾರೆ. ಯುವಜನರ ಭಜನ್ ಕ್ಲಬ್ಬಿಂಗ್ನಲ್ಲಿ ಖಂಜರಿ ಬಾರಿಸುತ್ತ ಪೋಸು ಕೊಡುವವರು, ಪ್ರತಿಭಟಿಸುವ ಯುವಕರನ್ನು, ಸವಾಲೊಡ್ಡುತ್ತಿರುವ ವಿರೋಧ ಪಕ್ಷಗಳನ್ನು ಸಹಿಸಲಾರದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಿ ಕೊಡುತ್ತಿರುವುದು ದೊಡ್ಡ ವ್ಯಂಗ್ಯ.